ಚೆನ್ನೈ(ತಮಿಳುನಾಡು): ಸರ್ಕಾರಿ ಉದ್ಯೋಗದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಮತ್ತು ತೃತೀಯ ಲಿಂಗಿಗಳಿಗೆ ನಿರ್ದಿಷ್ಟವಾದ ಮೀಸಲಾತಿಯನ್ನು ನೀಡಬೇಕೆಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿ ಹೊರತಾಗಿಯೂ ವಿಶೇಷ ಮೀಸಲಾತಿ ಕೊಡಬೇಕೆಂದು ತಮಿಳುನಾಡು ಸರ್ಕಾರಕ್ಕೆ ನ್ಯಾ.ಎಂ.ಎಸ್.ರಮೇಶ ನಿರ್ದೇಶನ ನೀಡಿದ್ದಾರೆ.
ಅಲ್ಲದೇ, ಮಹಿಳಾ ಅಭ್ಯರ್ಥಿಗಳು ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡುವ ವಿನಾಯಿತಿಗಳನ್ನು ಲೈಂಗಿಕ ಅಲ್ಪಸಂಖ್ಯಾತರು ಹಾಗೂ ತೃತೀಯ ಲಿಂಗಿಗಳಿಗೆ ನೀಡುವುದೊಂದಿಗೆ ಅವರಿಗೆ ದೈಹಿಕ ಪರೀಕ್ಷೆಯಲ್ಲೂ ವಿನಾಯಿತಿ ಕೊಡಬೇಕು. ಅವರು ತಮ್ಮನ್ನು ತಾವು 'ಪುರುಷ' ಅಥವಾ 'ತೃತೀಯ ಲಿಂಗಿ' ಎಂದೂ ಗುರುತಿಸಿಕೊಂಡರು ಸಹ ನೇಮಕಾತಿಯಲ್ಲಿ ಈ ವಿನಾಯಿತಿಯನ್ನು ನೀಡಬೇಕೆಂದು ಹೈಕೋರ್ಟ್ ಹೇಳಿದೆ.
ಜತೆಗೆ ಮೀಸಲಾತಿ ಕಲ್ಪಿಸುವಾಗ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯ ಸವಲತ್ತುಗಳನ್ನು ನೀಡಲು ಬಳಸುವ ಅನುಪಾತವನ್ನು ಅಳವಡಿಸಿಕೊಂಡು ಇವರಿಗೂ ಮೀಸಲಾತಿ ನೀಡಬೇಕೆಂದು ಸೂಚಿಸಿದೆ.