ಅಲಿಗಢ (ಉತ್ತರ ಪ್ರದೇಶ): ಇತ್ತೀಚೆಗೆ ನಾಪತ್ತೆಯಾಗಿದ್ದ 16 ವರ್ಷದ ಬಾಲಕಿಯ ಶವ ಹೊಲದಲ್ಲಿ ಪತ್ತೆಯಾಗಿದ್ದು, ಈ ಘಟನೆ ಸಂಬಂಧ ಅಕ್ರಾಬಾದ್ ಪ್ರದೇಶದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಅಪ್ರಾಪ್ತೆ ಕಳೆದ 10 ವರ್ಷಗಳಿಂದ ತನ್ನ ತಾಯಿ ಮನೆಯಲ್ಲಿ ವಾಸಿಸುತ್ತಿದ್ದಳು. ಭಾನುವಾರ ಮಧ್ಯಾಹ್ನ ಬಾಲಕಿ ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಹೊಲಗಳಿಗೆ ಹೋಗಿದ್ದು, ಮತ್ತೆ ಹಿಂತಿರುಗಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬ ಸದಸ್ಯರು ಅವಳನ್ನು ಹುಡುಕಲು ಪ್ರಾರಂಭಿಸಿದಾಗ ಅವರ ದೇಹವು ಹೊಲದಲ್ಲಿ ಪತ್ತೆಯಾಗಿದೆ.
ಇನ್ನು ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಪೊಲೀಸ್ ವಾಹನಕ್ಕೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿದ್ದಾರೆ. ಕೊಲೆ ಮಾಡಿದ ಆರೋಪಿಯನ್ನು ಪತ್ತೆ ಹಚ್ಚುವವರೆಗೆ ಶವ ಸುಡುವುದಿಲ್ಲ ಎಂದು ಪಣತೊಟ್ಟಿದ್ದಾರೆ.
ಇನ್ನು ಬಾಲಕಿಯ ಕತ್ತು ಹಿಸುಕಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೇ, ಆಕೆ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಅನುಮಾನ ವ್ಯಕ್ತವಾಗಿದೆ.
ಇನ್ನು ಗ್ರಾಮಸ್ಥರು ನಡೆಸಿದ ದಾಳಿಯಲ್ಲಿ ಇನ್ಸ್‌ಪೆಕ್ಟರ್ ಪ್ರಣೇಂದ್ರ ಕುಮಾರ್ ಗಾಯಗೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮುನಿರಾಜ್ ಜಿ ಭಾನುವಾರ ತಡರಾತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸದ್ಯ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.