ನವದೆಹಲಿ: ಮಧ್ಯ ದೆಹಲಿಯ ಐಟಿಒದಲ್ಲಿ ಪ್ರತಿಭಟನಾಕಾರರು ಬ್ಯಾರಿಕೇಡ್ ಮುರಿದು, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸ್ ವಾಹನ ಧ್ವಂಸ ಮಾಡಿದ್ದಾರೆ.
ಗಾಜಿಪುರ ಗಡಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ ಮಾಡಲಾಗಿದೆ. ದೆಹಲಿಯ ಸಿಂಘುಗಡಿಯಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಅಕ್ಷರಧಾಮ ಬಳಿ ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ ಸಿಡಿಸಲಾಗಿದೆ.
ಸಿಂಘು ಮತ್ತು ಟಿಕ್ರಿಯಲ್ಲಿ ಬೀಡು ಬಿಟ್ಟಿದ್ದ ರೈತ ಸಂಘಟನೆಯ ಸದಸ್ಯರು ಇಂದು ಮುಂಜಾನೆ ಬ್ಯಾರಿಕೇಡ್‌ಗಳನ್ನು ಮುರಿದು ಹೊರ ವರ್ತುಲ ರಸ್ತೆಯ ಮೂಲಕ ದೆಹಲಿ ಪ್ರವೇಶಿಸಲು ಯತ್ನಿಸಿದರು. ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ರೈತರ ಟ್ರ್ಯಾಕ್ಟರ್ ಪರೇಡ್ ತೀವ್ರ ಸ್ವರೂಪ ಪಡೆಯುತ್ತಿದೆ. ಸಾವಿರಾರು ಪ್ರತಿಭಟನಾ ನಿರತ ರೈತರು ದೆಹಲಿಯಲ್ಲಿ ಟ‍್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ರೈತರ ಟ್ರಾಕ್ಟರ್ ರ‍್ಯಾಲಿ ಹಿನ್ನೆಲೆ ಕರ್ನಾಲ್ ಬೈಪಾಸ್‌ನಲ್ಲಿ ಪ್ರತಿಭಟನಾಕಾರರು ದೆಹಲಿಗೆ ಪ್ರವೇಶಿಸಲು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದರು. ಗಾಜಿಪುರ ಗಡಿಯ ಸರಾಯ್ ಕೇಲ್ ಖಾನ್ ಐಟಿಒ ಬಳಿ ರೈತರ ಟ್ರ್ಯಾಕ್ಟರ್ ರ‍್ಯಾಲಿ ತಲುಪಿದೆ. ಐಟಿಒ ತಲುಪಿದ ಪ್ರತಿಭಟನಾನಿರತರು ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ಎದುರು ಇರಿಸಲಾಗಿರುವ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು, ಬಸ್ ಧ್ವಂಸಗೊಳಿಸಿದ್ದಾರೆ.