ಸೋನಭದ್ರ (ಉತ್ತರ ಪ್ರದೇಶ): ಬಾಲಿವುಡ್ ಚಲನಚಿತ್ರಗಳಿಗೆ ಎದುರಾಗಿರುವ ವಿರೋಧದ ಅಲೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಚಿತ್ರಗಳ ಟ್ರೈಲರ್ ಬಿಡುಗಡೆ ಆಗುತ್ತಿರುವಂತೆಯೇ ಅವುಗಳಿಗೆ ಬಹಿಷ್ಕಾರ ಹಾಕುವ ಪರಿಪಾಠ ಇತ್ತೀಚೆಗೆ ಆರಂಭವಾಗುತ್ತಿದೆ. ಇದೇ ಪರಿಪಾಠ ಮುಂದುವರಿದ ಭಾಗವಾಗಿ ಈಗ, ಅಜಯ್ ದೇವಗನ್ ಅವರ ಥ್ಯಾಂಕ್ ಗಾಡ್ ಚಲಚಿತ್ರದ ಬಹಿಷ್ಕಾರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಆರಂಭವಾಗಿದೆ.
ಸಾಮಾಜಿಕ ಜಾಲತಾಣಗಳು ಮಾತ್ರವಲ್ಲದೇ ಅಜಯ್ ದೇವಗನ್ ನಟನೆಯ ಚಲನಚಿತ್ರದ ವಿರುದ್ಧ ಕೆಲವೆಡೆ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಥ್ಯಾಂಕ್ ಗಾಡ್ ಚಿತ್ರದ ವಿರುದ್ಧ ಸೋನಭದ್ರದ ಓಬ್ರಾ ನಗರ ಪಂಚಾಯತ್ ಸದಸ್ಯ ಮತ್ತು ರಾಹುಲ್ ಶ್ರೀವಾಸ್ತವ ನೇತೃತ್ವದಲ್ಲಿ ಓಬ್ರಾದ ಚಿತ್ರಗುಪ್ತ ಭಗವಾನ್ ದೇವಸ್ಥಾನದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ನಟ ಅಜಯ್ ದೇವಗನ್ ಅವರ ಪ್ರತಿಕೃತಿ ದಹನ ಮಾಡಲಾಯಿತು.
ಭಗವಾನ್ ಚಿತ್ರಗುಪ್ತನನ್ನು ಕುರಿತು ಥ್ಯಾಂಕ್ ಗಾಡ್ ಚಿತ್ರದಲ್ಲಿ ತೋರಿಸಿರುವ ಕಥೆಯು ಅವಹೇಳನಕಾರಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅಜಯ್ ದೇವಗನ್ ಅವರನ್ನು ಚಿತ್ರಗುಪ್ತನ ಪಾತ್ರದಲ್ಲಿ ತೋರಿಸಿರುವುದಕ್ಕೆ ಟ್ವಿಟರ್‌ನಲ್ಲಿ ಕೂಡ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಓಬ್ರಾ ನಗರ ಪಂಚಾಯತ್ ಸದಸ್ಯ ರಾಹುಲ್ ಶ್ರೀವಾಸ್ತವ ಮಾತನಾಡಿ, ಬಾಲಿವುಡ್ ಸನಾತನ ಧರ್ಮದ ದೇವರನ್ನು ನಿರಂತರವಾಗಿ ಗೇಲಿ ಮಾಡುತ್ತಿದೆ. ಈಗ ದೀಪಾವಳಿಯಂದು ಬಿಡುಗಡೆಯಾಗುತ್ತಿರುವ ಥ್ಯಾಂಕ್ ಗಾಡ್ ಚಿತ್ರದಲ್ಲಿ ಭಗವಾನ್ ಚಿತ್ರಗುಪ್ತನ ಪಾತ್ರವನ್ನು ನಿರ್ವಹಿಸುತ್ತಿರುವ ಅಜಯ್ ದೇವಗನ್ ಅವರನ್ನು ಅರೆಬೆತ್ತಲೆ ಮಹಿಳೆಯರ ನಡುವೆ ಇರುವಂತೆ ತೋರಿಸಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಒಂದೆಡೆ ನಮ್ಮ ದೇಶದ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅವರಿಂದ ದೇವತೆಗಳ ಮಂದಿರ ನಿರ್ಮಾಣವಾಗುತ್ತಿದೆ. ಅದೇ ಸಮಯದಲ್ಲಿ ಬಾಲಿವುಡ್ ಹಿಂದೂ ಧರ್ಮದ ದೇವರು ಮತ್ತು ದೇವತೆಗಳನ್ನು ನಿರಂತರವಾಗಿ ಗೇಲಿ ಮಾಡುತ್ತಿದೆ. ಇದರಿಂದ ಕಾಯಸ್ಥ ಸಮಾಜದ ಜನರು ಅವಮಾನ ಅನುಭವಿಸುತ್ತಿದ್ದಾರೆ. ಈ ಚಲನಚಿತ್ರವನ್ನು ನಿಷೇಧಿಸುವಂತೆ ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಥ್ಯಾಂಕ್ ಗಾಡ್ ಚಿತ್ರದ ಟ್ರೈಲರ್ ಅನ್ನು 8 ಸೆಪ್ಟೆಂಬರ್ 2022 ರಂದು ಬಿಡುಗಡೆ ಮಾಡಲಾಗಿದೆ. ಈ ಚಿತ್ರ ದೀಪಾವಳಿಯಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಭಗವಾನ್ ಚಿತ್ರಗುಪ್ತನ ಪಾತ್ರದಲ್ಲಿದ್ದು, ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೂ ಮೊದಲು ಬ್ರಹ್ಮಾಸ್ತ್ರ ಮತ್ತು ಲಾಲ್ ಸಿಂಗ್ ಚಡ್ಡಾದಂತಹ ಭಾರೀ ಬಜೆಟ್ ಚಿತ್ರಗಳ ಬಗ್ಗೆ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಇದರಿಂದ ಚಿತ್ರಗಳ ಬಾಕ್ಸ್ ಆಫೀಸ್ ಪ್ರದರ್ಶನದ ಮೇಲೆ ವ್ಯಾಪಕ ಪರಿಣಾಮ ಬೀರಿತ್ತು.
ಇದನ್ನು ಓದಿ:ಸೋನಾಲಿ ಫೋಗಟ್ ಆತ್ಮಹತ್ಯೆ ಕೇಸ್: ಸಿಬಿಐಗೆ ವಹಿಸಿ ಆದೇಶ ಹೊರಡಿಸಿದ ಗೋವಾ ಮುಖ್ಯಮಂತ್ರಿ