ಹೈದರಾಬಾದ್: ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಬಿಜೆಪಿ ನಾಯಕಿ ನೂಪುರ್ ಶರ್ಮಾ ಪರವಾಗಿ ಕೆಲವರು ರ‍್ಯಾಲಿ ನಡೆಸಿದ್ದರಿಂದ ಮಹಾನಗರದ ಬೋವನಪಲ್ಲಿ ಪ್ರದೇಶದಲ್ಲಿ ಕೆಲಕಾಲ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಬೋವನಪಲ್ಲಿಯ ಹಸ್ಮತ್ ಪೇಟ್ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಕೆಲವರು ಕ್ಯಾಂಡಲ್ ಲೈಟ್ ರ‍್ಯಾಲಿ ನಡೆಸಿದ್ದರು. ರ್ಯಾಲಿಯಲ್ಲಿ ಪಾಲ್ಗೊಂಡಿದ್ದವರು ನೂಪುರ್ ಅವರನ್ನು ಬೆಂಬಲಿಸಿ ಬರೆಯಲಾದ ಭಿತ್ತಿ ಫಲಕಗಳನ್ನು ಹಿಡಿದುಕೊಂಡಿದ್ದರು ಹಾಗೂ ಅವರ ಪರವಾಗಿ ಘೋಷಣೆಗಳನ್ನು ಕೂಗಿದರು ಎನ್ನಲಾಗಿದೆ.
ಇದನ್ನು ಗಮನಿಸಿದ ಮತ್ತೊಂದು ಗುಂಪಿನ ಜನ, ಈ ರ‍್ಯಾಲಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ರ್ಯಾಲಿ ಆಯೋಜಕರ ವಿರುದ್ಧ ಪ್ರತಿಘೋಷಣೆಗಳನ್ನು ಕೂಗಲಾರಂಭಿಸಿದರು. ಈ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ವಾದ-ವಿವಾದ ಏರ್ಪಟ್ಟು ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಸಕಾಲಕ್ಕೆ ಸ್ಥಳಕ್ಕಾಗಮಿಸಿದ ಪೊಲೀಸರು ಯಾವುದೇ ಹೆಚ್ಚಿನ ಗೊಂದಲಕ್ಕೆ ಅವಕಾಶವಾಗದಂತೆ ಜನರನ್ನು ಚದುರಿಸಿದರು. ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಬಿಜೆಪಿ ನಾಯಕಿ ನೂಪುರ್ ಶರ್ಮಾ ಇವರು ಪ್ರವಾದಿ ಮಹಮ್ಮದರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ.
ಇದನ್ನು ಓದಿ