ಛತ್ರಪತಿ ಸಂಭಾಜಿನಗರ(ಮಹಾರಾಷ್ಟ್ರ): ಆತ ವೃತ್ತಿಯಲ್ಲಿ ಪ್ರಾಧ್ಯಾಪಕ. ಇಬ್ಬರು ಪುತ್ರಿಯರು, ಪತ್ನಿ ಇರುವ ಕೂಡು ಕುಟುಂಬ. ಇಷ್ಟಿದ್ದರೂ ಆತನಿಗೆ ಗಂಡು ಮಗು ಇಲ್ಲ ಎಂಬ ಕೊರಗು. ಇದನ್ನು ನೀಗಿಸಿಕೊಳ್ಳಲು ಆತ ಮಾಡಿದ ಪ್ಲಾನ್ ಮಾತ್ರ ಖತರ್ನಾಕ್. ಇದಕ್ಕೆ ಬಲಿಯಾಗಿದ್ದು ಕಾಲೇಜು ವಿದ್ಯಾರ್ಥಿನಿ. ಇವರ ದುಷ್ಕೃತ್ಯದ ವಿರುದ್ಧ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಘಟನೆಯ ವಿವರ: ಇಲ್ಲಿನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದ ನಾಟಕ ವಿಭಾಗದ ಪ್ರಾಧ್ಯಾಪಕ ಅಶೋಕ್ ಬಂದಗರ್ ಮತ್ತು ಪಲ್ಲವಿ ಬಂದಗರ್ ಅವರು ಕಾಲೇಜು ವಿದ್ಯಾರ್ಥಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದ ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ದಂಪತಿಗೆ ಗಂಡು ಮಗು ಜನಿಸದೇ ಇರುವುದು. ಮಕ್ಕಳಿಗೆ ಆದರ್ಶವಾಗಬೇಕಿದ್ದ ಪ್ರಾಧ್ಯಾಪಕ ಕಾಲೇಜು ವಿದ್ಯಾರ್ಥಿನಿಯ ಜೊತೆಗೆ ಅನುಚಿತವಾಗಿ ನಡೆದುಕೊಂಡು ಕೇಸ್ ಜಡಿಸಿಕೊಂಡಿದ್ದಾನೆ.
ವಿದ್ಯಾರ್ಥಿನಿಯೊಬ್ಬಳು ಕಾಲೇಜಿನಲ್ಲಿ ಪ್ರವೇಶ ಪಡೆದ ಬಳಿಕ ಆಕೆ ಹಾಸ್ಟೆಲ್ ಹುಡುಕಾಟದಲ್ಲಿದ್ದಳು. ಈ ವೇಳೆ, ಅದೇ ಕಾಲೇಜಿನ ಪ್ರಾಧ್ಯಾಪಕ ಅಶೋಕ್ ವಿದ್ಯಾರ್ಥಿನಿಗೆ ತನ್ನ ಮನೆಯಲ್ಲೇ ಪೇಯಿಂಗ್ ಗೆಸ್ಟ್ ರೀತಿಯಲ್ಲಿರುವ ಸಲಹೆ ನೀಡಿದ್ದಾನೆ. ಇದನ್ನು ವಿದ್ಯಾರ್ಥಿನಿ ನಂಬಿದ್ದಾರೆ. ಪ್ರಾಧ್ಯಾಪಕನ ಪತ್ನಿಯೂ ಮಗಳಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕೆಲ ದಿನಗಳ ನಂತರ ಪ್ರಾಧ್ಯಾಪಕ ವಿದ್ಯಾರ್ಥಿನಿಗೆ ಕಿರುಕುಳ ನೀಡಲು ಶುರು ಮಾಡಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆ ತನ್ನಿಂದ ದೂರ ಇರಲು ಸೂಚಿಸಿದ್ದಾರೆ. ಆದರೆ 2022 ರ ಜುಲೈನಲ್ಲಿ ಸಂತ್ರಸ್ತೆ ಮನೆಯಲ್ಲಿ ಮಲಗಿದ್ದಾಗ, ಅಶೋಕ್ ವಿದ್ಯಾರ್ಥಿನಿ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿದ್ಯಾರ್ಥಿನಿ ನಡೆದ ಘಟನೆಯನ್ನು ಪತ್ನಿಗೆ ತಿಳಿಸಿದ್ದಾರೆ. ಆದರೆ, ಆಕೆ ಅದನ್ನು ಸಲೀಸಾಗಿ ತೆಗೆದುಕೊಂಡು ಯಾರಿಗೂ ಹೇಳದಂತೆ ಬಾಯಿ ಮುಚ್ಚಿಸಿದ್ದಾರೆ.
ನೀನು ಇಂದಿನಿಂದ ಮನೆಯಿಂದ ಹೊರ ಹೋಗಬೇಡ. ನಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗು ಬೇಕಿದೆ. ಅದು ನಿನ್ನಿಂದ ಪಡೆಯಲು ಇಚ್ಚಿಸಿದ್ದೇವೆ ಎಂದು ಹೇಳಿದ್ದಾರೆ. ಇದಾದ ಬಳಿಕ ವಿದ್ಯಾರ್ಥಿನಿ ಮೇಲೆ ಪ್ರಾಧ್ಯಾಪಕ ಐದಾರು ಬಾರಿ ಬಲವಂತವಾಗಿ ದೌರ್ಜನ್ಯ ಎಸಗಿದ್ದಾನೆ. ಪತ್ನಿಯೇ ವಿದ್ಯಾರ್ಥಿಯನ್ನು ಅವರೊಂದಿಗೆ ಮಲಗುವ ಕೋಣೆಗೆ ಪದೇ ಪದೆ ಕಳುಹಿಸುತ್ತಿದ್ದರು ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ವಿದ್ಯಾರ್ಥಿನಿ ಮೇಲೆ ಹಲ್ಲೆ: ಇಷ್ಟಕ್ಕೆ ಬಿಡದ ದಂಪತಿ ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ. ಕಳ್ಳತನ ಆರೋಪ ಹೊರಿಸಿದ ಅವರು ವಿದ್ಯಾರ್ಥಿನಿಯನ್ನು ಕ್ರೂರವಾಗಿ ಥಳಿಸಿದ್ದಾರೆ. ಇದರಿಂದ ವಿದ್ಯಾರ್ಥಿನಿ ಪ್ರಜ್ಞೆ ಕಳೆದುಕೊಂಡಿದ್ದರು. ಯುವತಿ ಕುಟುಂಬಸ್ಥರು ಮನೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ವಿದ್ಯಾರ್ಥಿನಿ ತನ್ನ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ಕುರಿತು ಕಾಲೇಜು ಆಡಳಿತ ಮಂಡಳಿಗೂ ತಿಳಿಸಲಾಗಿದೆ. ಮಂಡಳಿ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದೆ. ಬಳಿಕ ವಿದ್ಯಾರ್ಥಿನಿ ಪ್ರಾಧ್ಯಾಪಕ ದಂಪತಿ ವಿರುದ್ಧ ಬೇಗಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗಂಡು ಮಗುವಿನ ಆಸೆಗೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಪ್ರಾಧ್ಯಾಪಕನ ಮೇಲೆ ಅತ್ಯಾಚಾರ ಕೇಸ್ ದಾಖಲಿಸಲಾಗಿದೆ. ಇದಕ್ಕೆ ಸಹಕರಿಸಿದ ಪತ್ನಿಯ ವಿರುದ್ಧವೂ ದೂರು ನೀಡಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಓದಿ: ದೇಶಕ್ಕಾಗಿ ಪದಕ ಗೆಲ್ಲಲೇ ಬೇಕು: 4ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ತರಬೇತಿ ಆರಂಭಿಸಿದ ಕುಸ್ತಿಪಟುಗಳು