ಚಂಡೀಗಢ: ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಕಾಂಗ್ರೆಸ್ ತೊರೆದು ಹೊಸ ಪಕ್ಷ ಘೋಷಿಸಿರುವ ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್‌ಗೆ ಸಂಕಷ್ಟಕ್ಕೆ ಎದುರಾಗಿದೆ. ತಮ್ಮ ಪಕ್ಷದ ಮಾಜಿ ನಾಯಕನ ವಿರುದ್ಧ ಸಮರ ಸಾರಿರುವ ಕೈ ಪಕ್ಷ ಇದೀಗ ಕ್ಯಾ.ಅಮರೀಂದರ್ ಸಿಂಗ್ ಅವರ ಪಾಕಿಸ್ತಾನದ ಸ್ನೇಹಿತೆ, ಪತ್ರಕರ್ತೆ ಅರೂಸಾ ಆಲಂಗೆ ಪಾಕ್‌ನ ಬೇಹುಗಾರಿಕೆ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಸಂಪರ್ಕದ ಆರೋಪ ಕೇಳಿಬಂದಿದೆ.
ಜಲಂಧರ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಪಂಜಾಬ್ ಡಿಸಿಎಂ ಸುಖಜಿಂದರ್ ಸಿಂಗ್ ರಾಂಧವಾ, ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರನ್ನು ಭೇಟಿ ಮಾಡುತ್ತಿದ್ದ ಪಾಕಿಸ್ತಾನದ ಪತ್ರಕರ್ತೆ ಅರೂಸಾ ಆಲಂ ಅವರಿಗೆ ಐಎಸ್‌ಐ ಜೊತೆ ಸಂಪರ್ಕವಿದೆಯೇ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು. ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಕೇಳಿದ್ದೇವೆ ಎಂದು ಹೇಳಿದ್ದಾರೆ.
ಆದರೆ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಕ್ಯಾ. ಅಮರೀಂದರ್ ಸಿಂಗ್, ರಾಂಧವಾ ಈಗ ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಲಂ ಅವರು ಕೇಂದ್ರದಿಂದ ಸೂಕ್ತ ಅನುಮತಿಗಳೊಂದಿಗೆ 16 ವರ್ಷಗಳಿಂದ ಭಾರತಕ್ಕೆ ಬರುತ್ತಿದ್ದರು. ಅರೂಸಾ ಅವರ ವೀಸಾವನ್ನು ಯಾರು ಪ್ರಾಯೋಜಿಸಿದ್ದರು? ನಾನು 16 ವರ್ಷಗಳಿಂದ ಸಹಜವಾಗಿ ಅವರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ನೀವು ಸಚಿವ ಸಂಪುಟದಲ್ಲಿ ಸಚಿವರಾಗಿದ್ದವರು. ಆ ವೇಳೆ ಇಂತಹ ಆರೋಪಗಳನ್ನು ಎಂದೂ ಮಾಡಿರಲಿಲ್ಲ. ಆಕೆ 16 ವರ್ಷಗಳಿಂದ ಕೇಂದ್ರ ಸರ್ಕಾರದ ಅನುಮತಿಗಳೊಂದಿಗೆ ಇಲ್ಲಿಗೆ ಬರುತ್ತಿದ್ದಳು. ಈ ಅವಧಿಯಲ್ಲಿ ಎನ್‌ಡಿಎ ಮತ್ತು ಯುಪಿಎ ಸರ್ಕಾರಗಳು ಆಡಳಿತದಲ್ಲಿ ಇದ್ದವು. ಆಗ ಯಾಕೆ ನೀವು ಆರೋಪ ಮಾಡಿಲ್ಲ ಎಂದು ಮಾಜಿ ಸಿಎಂ ಅಮರೀಂದರ್ ಸಿಂಗ್ ಮಾಧ್ಯಮ ಸಲಹೆಗಾರ ನಿನ್ನೆ ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಗೃಹ ಸಚಿವರೂ ಆಗಿರುವ ರಾಂಧವಾ, ಅಮರೀಂದರ್ ಸಿಂಗ್, ಅರೂಸಾ ಆಲಂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಅವರು ಭಾರತದಲ್ಲಿ ಹಲವು ವರ್ಷಗಳ ಕಾಲ ಇದ್ದಾರೆ. ಕೇಂದ್ರ ಸರ್ಕಾರವೂ ಕಾಲಕಾಲಕ್ಕೆ ಅವರ ವೀಸಾ ವಿಸ್ತರಿಸಿತ್ತು. ಪಂಜಾಬ್ ಕಾಂಗ್ರೆಸ್‌ನ ಇತ್ತೀಚಿನ ಬೆಳವಣಿಗೆಗಳಲ್ಲಿ ಸಿಂಗ್ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ನಂತರವೇ ಆಲಂ ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದಿದ್ದಾರೆ. ಸದ್ಯ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.