ಸೀತಾಪುರ (ಉತ್ತರ ಪ್ರದೇಶ): ಲಖಿಂಪುರ ಖೇರಿ ಜಿಲ್ಲೆಗೆ ತೆರಳುತ್ತಿದ್ದ ವೇಳೆ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ನಾಯಕಿ, ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ.
ಗೃಹ ಬಂಧನದಲ್ಲಿರುವ ಪ್ರಿಯಾಂಕಾ, ತಾವು ನೆಲೆಸಿರುವ ಅತಿಥಿಗೃಹದ ಕೊಠಡಿಯಲ್ಲಿ ತಾವೇ ಕಸ ಹೊಡೆದು ಸ್ವಚ್ಛಗೊಳಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ನಿನ್ನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಲೆಂದು ಭಾನುವಾರ ರಾತ್ರಿ ಪ್ರಿಯಾಂಕಾ ಗಾಂಧಿ ಹೋಗುತ್ತಿರುವಾಗ ಅವರನ್ನು ಯುಪಿ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ಸೀತಾಪುರ ಜಿಲ್ಲೆಯಲ್ಲಿ ಗೃಹ ಬಂಧನದಲ್ಲಿರಿಸಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ ಹಿಂಸಾಚಾರ: ಗಲಭೆಯಲ್ಲಿ 8 ಜನ ಸಾವು, ಇಂಟರ್ನೆಟ್ ಸೇವೆ ಸ್ಥಗಿತ
ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದ ಪ್ರಿಯಾಂಕಾ, " ಇಂದಿನ ಘಟನೆಯು ರೈತರನ್ನು ಬಗ್ಗು ಬಡಿಯಲು ಈ ಸರ್ಕಾರವು ರಾಜಕೀಯವನ್ನು ಬಳಸುತ್ತಿದೆ ಎಂಬುದನ್ನು ತೋರಿಸುತ್ತದೆ. ಈ ದೇಶವು ರೈತರ ದೇಶವಾಗಿದೆಯೇ ಹೊರತು ಬಿಜೆಪಿಯ ಉಗ್ರವಾದಿ ಸಿದ್ಧಾಂತದ ದೇಶವಲ್ಲ. ನಾನು ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿಯಾಗಲು ಹೊರಟಿದ್ದೆ ಹೊರತು ಯಾವುದೇ ಅಪರಾಧವನ್ನು ಮಾಡುತ್ತಿಲ್ಲ. ನೀವು ಯಾಕೆ ನಮ್ಮನ್ನು ತಡೆಯುತ್ತಿದ್ದೀರಿ? ನಿಮ್ಮ ಬಳಿ ವಾರಂಟ್ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.