ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ತೀವ್ರತೆ ಹೆಚ್ಚಾಗಿರುವ ಮಧ್ಯೆ ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು, ಇದರ ವಿರುದ್ಧ ಉತ್ತರ ಪ್ರದೇಶ ಎಐಸಿಸಿ ಕಾಂಗ್ರೆಸ್ ಅಧ್ಯಕ್ಷೆ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಪಂಚಾಯಿತಿ ಚುನಾವಣೆ ನಡೆಸಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ದೂಷಿಸಿರುವ ಪ್ರಿಯಾಂಕಾ ವಾದ್ರಾ, ರಾಜ್ಯದಲ್ಲಿ ನಡೆಯುತ್ತಿರುವುದು ಮಾನವೀಯತೆಯ ವಿರುದ್ಧದ ಅಪರಾಧ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ಹಾಜರಾಗಿರುವವರ ಪೈಕಿ ಗರ್ಭಿಣಿ ಸೇರಿ ಒಟ್ಟು 700 ಶಿಕ್ಷಕರು ಸಾವನ್ನಪ್ಪಿದ್ದಾರೆ. ಇದಕ್ಕೆ ಅಲ್ಲಿನ ಸರ್ಕಾರವೇ ನೇರ ಹೊಣೆ ಎಂದಿದ್ದಾರೆ. ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಪ್ರಿಯಾಂಕಾ, ಕೋವಿಡ್ ಎರಡನೇ ಅಲೆ ನಡುವೆ ಕೂಡ ಸುಮಾರು 60 ಸಾವಿರ ಗ್ರಾಮ ಸಭೆಗಳಿಗೆ ಚುನಾವಣೆ ನಡೆಸಲಾಗಿದೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದು ಇಸಿಸ್ಗಿಂತಲೂ ಘೋರ ಅಪರಾದ ಎಂದು ಅವರು ಹೇಳಿದ್ದಾರೆ. ಚುನಾವಣೆ ಕರ್ತವ್ಯದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 50 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶದಲ್ಲಿ ಕೋವಿಡ್ ಅಲೆ ಹೆಚ್ಚಾಗಿದ್ದು, ನಿತ್ಯ ಸಾವಿರಾರು ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಇದರ ಮಧ್ಯೆ ಅಲ್ಲಿನ ಸರ್ಕಾರ ಪಂಚಾಯಿತಿ ಚುನಾವಣೆ ನಡೆಸಿದ್ದು, ಅನೇಕ ವಿವಾದಗಳಿಗೆ ಕಾರಣವಾಗಿದೆ.