ನವದೆಹಲಿ: ಅಯೋಧ್ಯಾ ಭೂ ಹಗರಣದ ವರದಿಗಳು ಹೊರಬಂದ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಮ ಮಂದಿರ ಟ್ರಸ್ಟ್‌ಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಮಾರಾಟ ಮಾಡಿದ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಭಗವಾನ್ ರಾಮ ಪ್ರಾಮಾಣಿಕತೆಯ ಸಂಕೇತವಾಗಿದ್ದಾನೆ. ಆದರೆ, ಬಿಜೆಪಿ ಬೆಂಬಲಿತ ನಾಯಕರು ಮತ್ತು ಅಧಿಕಾರಿಗಳು ಮಂದಿರ ನಿರ್ಮಾಣಕ್ಕೆ ಮೀಸಲಾದ ಟ್ರಸ್ಟ್‌ನಿಂದ ಲಾಭ ಪಡೆದಿದ್ದಾರೆ ಎಂದು ಆರೋಪ ಮಾಡಿದರು.
ದೇಶದ ಬಹುತೇಕ ಮಂದಿ ರಾಮಮಂದಿರ ಟ್ರಸ್ಟ್‌ಗೆ ದೇಣಿಗೆ ನೀಡಿದ್ದಾರೆ. ಈ ಸಂಬಂಧ ಮನೆ - ಮನೆಗೆ ತೆರಳಿ ಅಭಿಯಾನವನ್ನೂ ನಡೆಸಲಾಗಿದೆ. ಇದು ಧಾರ್ಮಿಕ ವಿಷಯವಾಗಿದೆ. ಆದರೆ, ದಲಿತರ ಭೂಮಿಯನ್ನು ಈ ಸಂಬಂಧ ಅವರಿಂದ ಪಡೆಯದೇ ಕಿತ್ತುಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನ್ಯಾಯಾಲಯದ ಆದೇಶದ ಮೇರೆಗೆ ದೇವಾಲಯವನ್ನು ನಿರ್ಮಿಸಲಾಗುತ್ತಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಮುಖಂಡರ ವಿರುದ್ಧ ತನಿಖೆ ನಡೆಸಲು ಸಾಧ್ಯವಿಲ್ಲದ ಕಾರಣ ನ್ಯಾಯಾಲಯದ ಮೂಲಕವೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಅಯೋಧ್ಯೆ ತೀರ್ಪು ಕಾನೂನಿನ ಆಧಾರದ ಮೇಲೆ ನೀಡಲಾಗಿದೆ, ಧರ್ಮದ ಮೇಲಲ್ಲ: ರಂಜನ್ ಗೊಗೊಯ್
ಸೇಲ್ ಡೀಡ್‌ಗಳಲ್ಲಿ ರಾಮಮಂದಿರ ಟ್ರಸ್ಟ್‌ನ ಸದಸ್ಯರ ಸಹಿ ಪೇಪರ್‌ಗಳಲ್ಲಿದೆ. ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಗರಣದ ಬಗ್ಗೆ ತಿಳಿದಿದೆ ಹಾಗೆ ಆರ್ಎಸ್ಎಸ್ ಸದಸ್ಯ ಮತ್ತು ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಮತ್ತು ಅಯೋಧ್ಯೆಯ ಮೇಯರ್ ರಿಷಿಕೇಶ್ ಉಪಾಧ್ಯಾಯ ಅವರು ಮಾರಾಟ ಪತ್ರಗಳಲ್ಲಿ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದ ಅವರು, ಮುಖಂಡರು ಮತ್ತು ಅಧಿಕಾರಿಗಳಿಗೆ ಲಾಭ ಮಾಡಿಕೊಡಲು ಟ್ರಸ್ಟ್‌ನ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
2017ರಲ್ಲಿ 2 ಕೋಟಿ ಮೌಲ್ಯದ ಭೂಮಿಯನ್ನು ಟ್ರಸ್ಟ್‌ಗೆ 26.5 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. 2.33 ಹೆಕ್ಟೇರ್ ಭೂಮಿ ಇದಾಗಿದ್ದು, ಇದು ವಕ್ಫ್ ಭೂಮಿಯಾಗಿದೆ. ಈ ಸಂಬಂಧ 2018 ರಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂಬ ಬಿಜೆಪಿ ಪ್ರಶ್ನೆಗೆ, ‘ಟ್ರಸ್ಟಿನ ಹಣವನ್ನು ಬಿಜೆಪಿ ಲೂಟಿ ಮಾಡುತ್ತಿರುವುದಕ್ಕೆ ನಾವು ಅಡ್ಡಿಪಡಿಸುತ್ತೇವೆ’ ಎಂದು ಪ್ರಿಯಾಂಕಾ ಟಾಂಗ್ ನೀಡಿದ್ದಾರೆ.