ಮಿರ್ಜಾಪುರ(ಉತ್ತರ ಪ್ರದೇಶ): ತಾಯಿಯೊಬ್ಬಳು ತನ್ನ ಮಕ್ಕಳನ್ನು ಮನೆಯಲ್ಲಿ ತಲೆ ಕೆಳಗಾಗಿ ನೇತುಹಾಕಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನೆಲ್ಲೇ, ಖಾಸಗಿ ಶಾಲೆಯೊಂದರ ಪ್ರಾಂಶುಪಾಲ ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ಮಗುವನ್ನು ತಲೆಕೆಳಗಾಗಿ ನೇತಾಡಿಸಿದ ಆಘಾತಕಾರಿ ಘಟನೆ ನಡೆದಿದೆ.
ಬಾಲಕ ತಲೆ ಕೆಳಗಾಗಿ ನೇತಾಡುತ್ತಿರುವ ಹಾಗೂ ಹಲವಾರು ಮಕ್ಕಳು ಅದನ್ನು ನೋಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಮಿರ್ಜಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಷ್ಕರ್ ಶಿಕ್ಷಣಾಧಿಕಾರಿಗಳಿಗೆ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸುವಂತೆ ಸೂಚನೆ ನೀಡಿದ್ದಾರೆ.
ವರದಿಗಳ ಪ್ರಕಾರ, ಈ ಘಟನೆಯು ಗುರುವಾರ ಅಹ್ರೌರಾದಲ್ಲಿರುವ ಸದ್ಭಾವನಾ ಶಿಕ್ಷಣ್ ಸಂಸ್ಥಾನ್ ಜೂನಿಯರ್ ಹೈಸ್ಕೂಲ್‌ನಲ್ಲಿ ನಡೆದಿದೆ. ಶಾಲೆಯ ಪ್ರಾಂಶುಪಾಲರಾದ ಮನೋಜ್ ವಿಶ್ವಕರ್ಮ ಅವರು 2ನೇ ತರಗತಿಯ ವಿದ್ಯಾರ್ಥಿ ಸೋನು ಯಾದವ್ಗೆ ಈ ರೀತಿಯ 'ಶಿಕ್ಷೆ' ನೀಡಿದ್ದಾರೆ.
ಊಟ ಮಾಡುವಾಗ ಚೇಷ್ಟೆ ಮಾಡಿದ್ದಕ್ಕೆ ಕೋಪ
ಸೋನು ಯಾದವ್ ಊಟ ಮಾಡುವಾಗ ಚೇಷ್ಟೆ ಮಾಡಿದ್ದಕ್ಕಾಗಿ ಕೋಪಗೊಂಡ ಪ್ರಾಂಶುಪಾಲ ಮನೋಜ್ ವಿಶ್ವಕರ್ಮ ಸೋನು ಯಾದವ್ನ ಒಂದು ಕಾಲನ್ನು ಹಿಡಿದು ಮೊದಲನೇ ಮಹಡಿಯ ಮೇಲಿಂದ ತಲೆ ಕೆಳಗಾಗಿ ನೇತಾಡಿಸಿದ್ದಾರೆ. ಸೋನು ಯಾದವ್ ಕಿರುಚುತ್ತಿದ್ದರೂ, ವಿಶ್ವಕರ್ಮ ಮನಸ್ಸು ಕರಗಲಿಲ್ಲ ಎನ್ನಲಾಗಿದೆ.
ಗೋಲ್ಗಪ್ಪಾ ತಿನ್ನುವಾಗ ಮಾತ್ರ ನನ್ನ ಮಗ ಎಲ್ಲರಂತೆ ಚೇಷ್ಟೆ ಮಾಡುತ್ತಾನೆ. ಆದರೆ ಈಗ ನನ್ನ ಮಗನಿಗೆ ಅವರ ಪ್ರಾಂಶುಪಾಲರು ಜೀವಕ್ಕೆ ಮುಳುವಾಗಬಹುದಾದ ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ಸೋನುಯಾದವ್ ತಂದೆ ರಂಜಿತ್ ಯಾದವ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕ್ರಿಶ್ಚಿಯಾನೋಗೆ ಒಳ್ಳೆಯದಾದ್ರೆ, ನನಗೂ ಒಳ್ಳೆಯದೇ: ಡೇವಿಡ್ ವಾರ್ನರ್ ಮಾಡಿದ್ದೇನು ನೋಡಿ..