ಕಾನ್ಪುರ(ಉತ್ತರಪ್ರದೇಶ): ಉತ್ತರಪ್ರದೇಶ ಕಾನ್ಪುರ ಮೂಲದ ಸ್ಟಾರ್ಟ್ಅಪ್ ಹೂವುಗಳಿಂದ ತಯಾರಿಸುವ ಸುಗಂಧದ್ರವ್ಯ ಮತ್ತು ಕೃತಕ ಚರ್ಮದ ವಸ್ತುಗಳನ್ನು ಇಂಗ್ಲೆಂಡ್ನ ರಾಜಕುಮಾರ ಪ್ರಿನ್ಸ್ ವಿಲಿಯಂ ಅವರು ಬಹುವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ಟ್ಅಪ್ ಉತ್ಪಾದಿಸುವ ವಸ್ತುಗಳನ್ನು ಇಂಗ್ಲೆಂಡ್ ರಾಜಕುಮಾರ ವೈಯಕ್ತಿಕವಾಗಿ ಪರಿಶೀಲಿಸಿದ್ದಾರೆ. ಇದು ಸಂಸ್ಥೆಗೆ ಶಕ್ತಿ ನೀಡಿದಂತಾಗಿದೆ ಎಂದು ಸ್ಟಾರ್ಟಅಪ್ ಆರಂಭಿಸಿ ಅಂಕಿತ್ ಅಗರ್ವಾಲ್ ತಿಳಿಸಿದ್ದಾರೆ.
ಲಂಡನ್‌ನ ವಿನ್‌ಸ್ಟರ್‌ನಲ್ಲಿ ನಡೆದ ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಬಹುಕೋಟಿ ಮೌಲ್ಯದ ಅರ್ಥ್‌ಶಾಟ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 15 ಸ್ಟಾರ್ಟ್‌ಅಪ್‌ಗಳಲ್ಲಿ ಕಾನ್ಪುರದ ಉದ್ಯಮಿ ಅಂಕಿತ್ ಅಗರ್ವಾಲ್ ಕೂಡ ಭಾಗವಹಿಸಿದ್ದರು. ಈ ವೇಳೆ ಪ್ರಿನ್ಸ್ ವಿಲಿಯಂ ಅವರು ಭಾರತದ ಸ್ಟಾರ್ಟ್ಅಪ್ ನಿರ್ಮಿಸಿದ ಸುಗಂಧದ್ರವ್ಯವನ್ನು ಇಷ್ಟಪಟ್ಟಿದ್ದಾರೆ. ಪ್ರಿನ್ಸ್ ಕೃತಕ ಚರ್ಮದ ವಸ್ತುವನ್ನು ಪರಿಶೀಲಿಸುತ್ತಿರುವ ಚಿತ್ರ ಕೂಡ ಇದೆ.
ಅಂಕಿತ್ ಅಗರ್ವಾಲ್ ಅವರು ಐಐಟಿ ಕಾನ್ಪುರದ ಜೊತೆಗೂಡಿ ಸ್ಟಾರ್ಟ್ಅಪ್ ಇನ್ನೋವೇಶನ್ ಇನ್ಕ್ಯುಬೇಶನ್ ಸೆಂಟರ್ ಆರಂಭಿಸಿದ್ದಾರೆ. ಇದು ಉತ್ತರ ಪ್ರದೇಶದ ವಿವಿಧ ನಗರಗಳಿಂದ ಸಂಗ್ರಹಿಸಿದ ಹೂವುಗಳಿಂದ ಸುಗಂಧದ್ರವ್ಯ ಮತ್ತು ಕೃತಕ ಚರ್ಮವನ್ನು ತಯಾರಿಸುತ್ತದೆ.
ಗಂಗಾನದಿ ದಡದ ಮೇಲೆ ಹೊಳೆದ ಐಡಿಯಾ: 2015 ರಲ್ಲಿ ಮಕರ ಸಂಕ್ರಾಂತಿಯ ದಿನದಂದು ಜೆಕ್ ಗಣರಾಜ್ಯದಿಂದ ಬಂದಿದ್ದ ತನ್ನ ಸ್ನೇಹಿತ ಮತ್ತು ಅಂಕಿತ್ ಅಗರ್ವಾಲ್ ಅವರು ಗಂಗಾನದಿಯ ದಡದ ಮೇಲೆ ಕುಳಿತು ಜನರ ಪೂಜಾ ವಿಧಾನಗಳನ್ನು ಗಮನಿಸುತ್ತಿದ್ದರು. ಈ ವೇಳೆ ಪೂಜೆಯ ನಂತರ ಜನರು ಹೂವುಗಳನ್ನು ಅರ್ಪಿಸುತ್ತಿದ್ದರು. ಇದು ದೇವಾಲಯ ಮುಂದೆ ಹೂವಿನ ರಾಶಿಯನ್ನೇ ಸೃಷ್ಟಿಸಿತ್ತು. ಇದನ್ನು ಕಂಡ ಅಂಕಿತ್ ಸ್ನೇಹಿತ ಹೂವನ್ನು ಒಂದೆಡೆ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದ.
ಓದಿ: ಒಡಿಶಾ ಸಚಿವರಿಗೆ ಗುಂಡೇಟು ಪ್ರಕರಣ; ಮರಣೋತ್ತರ ಪರೀಕ್ಷೆ ವರದಿ ಬಹಿರಂಗ, ನಬಾ ಕಿಶೋರ್ ದಾಸ್ ಹೃದಯಸ್ತಂಭನದಿಂದ ಸಾವು!
ಇದನ್ನು ಕೇಳಿಸಿಕೊಂಡ ಅಂಕಿತ್ ಅಗರ್ವಾಲ್ಗೆ ತಲೆಯಲ್ಲಿ ಮಿಂಚಿನಂತೆ ಐಡಿಯಾ ಬಂದಿದೆ. ಹೂವುಗಳನ್ನು ಬಳಸಿಕೊಂಡು ಸುಗಂಧದ್ರವ್ಯದ ಊದಿನಕಡ್ಡಿಯನ್ನು ಉತ್ಪಾದಿಸುವ ಬಗ್ಗೆ ಯೋಚಿಸಿದ್ದಾರೆ. ಈ ಕಲ್ಪನೆಯನ್ನು ಸ್ನೇಹಿತನೊಂದಿಗೆ ಹಂಚಿಕೊಂಡು, ಸ್ಟಾರ್ಟ್ಅಪ್ ಅಡಿಯಲ್ಲಿ ಸಂಸ್ಥೆಯನ್ನು ಆರಂಭಿಸುವ ಬಗ್ಗೆ ಚರ್ಚಿಸಿದ್ದಾರೆ. ಬಳಿಕ 2016 ರಲ್ಲಿ ಐಐಟಿ ಕಾನ್ಪುರದಲ್ಲಿ ತಮ್ಮದೇ ಆದ ಸ್ಟಾರ್ಟ್ಅಪ್ ಅನ್ನು ಆರಂಭಿಸಿದರು.
ನಿತ್ಯ 12 ಟನ್ ಹೂವು ಆಮದು: ಧೂಪದ್ರವ್ಯದ ತುಂಡುಗಳು ಮತ್ತು ಕೃತಕ ಚರ್ಮದ ಉತ್ಪಾನದೆಯಲ್ಲಿ ತೊಡಗಿಸಿಕೊಂಡು, ಇದಕ್ಕಾಗಿ ಕಾನ್ಪುರ, ಅಯೋಧ್ಯೆ, ವಾರಾಣಸಿ ಸೇರಿದಂತೆ ಹಲವು ನಗರಗಳಿಂದ ಪ್ರತಿದಿನ ಹೂವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಸ್ಟಾರ್ಟ್ಅಪ್ನಿಂದಾಗಿ ಸ್ಥಳೀಯ ಮಹಿಳೆಯರಿಗೂ ಉದ್ಯೋಗಾವಕಾಶ ಸಿಕ್ಕಿದೆ ಎಂದು ಹೇಳುತ್ತಾರೆ ಉದ್ಯಮಿ ಅಂಕಿತ್. ಪರಿಶೀಲನೆಯ ಬಳಿಕ ಅಂತಿಮ ಉತ್ಪನ್ನಕ್ಕಾಗಿ ಸಂಸ್ಕರಿಸಲು ಪ್ರತಿದಿನ ಸುಮಾರು 12 ಟನ್ ಹೂವನ್ನು ಸಂಗ್ರಹಿಸಲಾಗುತ್ತದೆ. ಈ ಉದ್ಯಮವಲ್ಲದೇ, ಅಂಕಿತ್ ಥರ್ಮಾಕೋಲ್ ತಯಾರಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.
ಓದಿ: ಆರ್ಎಸ್ಎಸ್ ಎಡ- ಬಲವಲ್ಲ, ರಾಷ್ಟ್ರೀಯವಾದಿ: ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ