ನವದೆಹಲಿ: ಭಾರತದ ಅತಿಥೇಯತ್ವದಲ್ಲಿ ಜಿ 20 ಶೃಂಗಸಭೆ ಯಶಸ್ವಿಯಾಗಿ ದೆಹಲಿಯಲ್ಲಿ ನಡೆದಿದ್ದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಜಾಗತಿಕ ನಾಯಕರ ಆಗಮನದ ಹಿನ್ನೆಲೆ ನಗರದ ಭದ್ರತೆ ಸೇರಿದಂತೆ ಸಂಚಾರ ಸೌಲಭ್ಯವನ್ನು ಅತ್ಯಂತ ಯಶಸ್ವಿಯಾಗಿ ದೆಹಲಿ ಪೊಲೀಸರು ನಿರ್ವಹಿಸಿ ಶಹಬ್ಬಾಷ್ ಎನಿಸಿಕೊಂಡಿದ್ದಾರೆ . ಈ ಹಿನ್ನೆಲೆಯಲ್ಲಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಪೊಲೀಸರಿಗಾಗಿ ವಿಶೇಷ ಔತಣಕೂಟ ಆಯೋಜಿಸಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ನಡೆದ ಈ ಶೃಂಗಶಬೆಯಲ್ಲಿ 30 ಜಾಗತಿಕ ನಾಯಕರು, ಯುರೋಪಿಯನ್ ಯುನಿಯನ್ನ ಅಧಿಕಾರಿಗಳು, ಅತಿಥಿ ದೇಶಗಳು ನಿಯೋಗ, ಅಂತಾರಾಷ್ಟ್ರೀಯ ಸಂಘಟನೆಯ 14 ಮುಖ್ಯಸ್ಥರು ಆಗಮಿಸಿದ್ದರು. ದೆಹಲಿ ಪೊಲೀಸರಿಗೆ ಭಾರತೀಯ ವಾಯುಪಡೆ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಕೆಲವು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಂತಹ ವಿಶೇಷ ಕೇಂದ್ರೀಯ ಸಂಸ್ಥೆಗಳೂ ಭದ್ರತೆಗೆ ಜೊತೆಯಾಗಿದ್ದವು.
ಶೃಂಗಸಭೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 50 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಇದರಲ್ಲಿ ಡಾಗ್ ಸ್ಕಾಡ್ ಸೇರಿದಂತೆ ವಿಶೇಷ ಘಟಕಗಳನ್ನು ಕೂಡ ಸುರಕ್ಷತೆಗೆ ನೇಮಿಸಲಾಗಿತ್ತು. ಶೃಂಗಸಭೆ ಅಚ್ಚುಕಟ್ಟಾಗಿ ನಡೆಯುವಲ್ಲಿ ದೆಹಲಿ ಪೊಲೀಸರ ಪಾತ್ರ ಕೂಡ ಇದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಸಲುವಾಗಿ ಪ್ರಧಾನಿ ಮೋದಿ ಅವರು ಆಯ್ದ ಸುಮಾರು 450 ಪೊಲೀಸ್ ಸಿಬ್ಬಂದಿಗಳೊಂದಿಗೆ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಈ ಔತಣ ಕೂಟ ಯಾವಾಗ ನಡೆಯಲಿದೆ ಎಂಬ ದಿನಾಂಕ ನಿಗದಿಯಾಗಿಲ್ಲ. ದೆಹಲಿ ಪೊಲೀಸ್ ದಳದ 450 ಮಂದಿ ಇದರಲ್ಲಿ ಭಾಗಿಯಾಗಲಿದ್ದು, ಈ ವಾರಾಂತ್ಯದ ಬಳಿಕ ಈ ಪಟ್ಟಿ ಬಿಡುಗಡೆಯಾಗಲಿದೆ. ಶೃಂಗಸಭೆಯಲ್ಲಿ ಅದ್ಬುತ ಕರ್ತವ್ಯ ಪ್ರದರ್ಶಿಸಿದ ಅಧಿಕಾರಿಗಳ ಪಟ್ಟಿಯನ್ನು ಪ್ರತಿ ಜಿಲ್ಲೆಗಳಿಂದ ನೀಡುವಂತೆ ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಕೂಡ ಇಲಾಖೆಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಕೇಂದ್ರ ದೆಹಲಿಯ ಪ್ರಗತಿ ಮೈದಾನ ಪ್ರದೇಶದಲ್ಲಿ ಹೊಸದಾಗಿ ನಿರ್ಮಾಣ ಆಗಿರುವ ಭಾರತ ಮಂಟಪಂನಲ್ಲಿ ಶೃಂಗಸಭೆ ಆಯೋಜಿಸಲಾಗಿತ್ತು. ಇಲ್ಲಿ ಬಹು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಾಗಿಯಾದ ಪ್ರತಿಯೊಬ್ಬ ಜಾಗತಿಕ ನಾಯಕರ ಸುರಕ್ಷತೆಯನ್ನು ಸರಾಗವಾಗಿ ದೆಹಲಿ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿ ನಿರ್ವಹಿಸಿದ್ದರು. ಅವರ ಈ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರಾದ ಸಂಜಯ್ ಆರೋರಾ ಕೂಡ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವಿಶೇಷ ಮೆಚ್ಚುಗೆ ಪ್ರಮಾಣ ಪತ್ರವನ್ನು ಮಂಗಳವಾರ ನೀಡಲಿದ್ದಾರೆ.
ಅಭಿನಂದನಾ ಸಮಾರಂಭವು ಶೃಂಗಸಭೆಯ ವ್ಯವಸ್ಥೆಗಳ ದೋಷರಹಿತ ವ್ಯವಸ್ಥೆಯ ಮೂಲಕ ಇಡೀ ಜಗತ್ತಿನ ಗಮನ ಸೆಳೆಯುವಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಭದ್ರತೆಯಲ್ಲಿ ಭಾಗಿಯಾದ ರಕ್ಷಣಾ ದಳದ ವೃತ್ತಿಪರತೆಯನ್ನು ಎತ್ತಿ ತೋರಿಸಿದ್ದವು. (ಐಎಎನ್ಎಸ್)
ಇದನ್ನೂ ಓದಿ: ಜಿ20 ಶೃಂಗಸಭೆಯ ಯಶಸ್ಸು ಮತ್ತು ಭಾರತ: ಇಲ್ಲಿದೆ ಸಮಗ್ರ ಅವಲೋಕನ