ನವದೆಹಲಿ: ದೇಶದಲ್ಲಿ ಕೋವಿಡ್ ಸ್ಥಿತಿಗತಿಗಳ ಬಗ್ಗೆ ತಿಳಿಯುವ ಸಲುವಾಗಿ ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರದ ಸಚಿವರ ಮಂಡಳಿಯ ಸಭೆ ನಡೆಯಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿದ್ದು, ಇದೇ ವೇಳೆ ಹಲವು ಇಲಾಖೆಗಳ ಕಾರ್ಯವೈಖರಿಯ ಪರಾಮರ್ಶೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಕೇಂದ್ರದ ರಸ್ತೆ ಮತ್ತು ಸಾರಿಗೆ ಇಲಾಖೆ, ನಾಗರಿಕ ವಿಮಾನಯಾನ ಮತ್ತು ಟೆಲಿಕಾಂ ಇಲಾಖೆಯ ಕಾರ್ಯವೈಖರಿಯ ವಿಶ್ಲೇಷಣೆ ನಡೆಯಲಿರುವ ಸಾಧ್ಯತೆಯಿದ್ದು, ಕೋವಿಡ್ ಸ್ಥಿತಿಗತಿಗಳ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಸಲಾಗುತ್ತದೆ.
ಹಿಂದಿನ ವಾರವಷ್ಟೇ ಪ್ರಧಾನಿ ಮೋದಿ ಕೇಂದ್ರದ ವಿವಿಧ ಇಲಾಖೆಗಳ ಕಾರ್ಯವೈಖರಿಯ ಬಗ್ಗೆ ವಿಶ್ಲೇಷಿಸುವ ಸಲುವಾಗಿ ಕ್ಯಾಬಿನೆಟ್ ಮತ್ತು ಕೇಂದ್ರ ಸಚಿವಾಲಯಗಳ ರಾಜ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದರು.
ಇದನ್ನೂ ಓದಿ: Ravi Poojari: ಮುಂಬೈ, ಕೇರಳ ಪೊಲೀಸರ ಬಳಿಕ ಗುಜರಾತ್ ಪೊಲೀಸ್ ವಶಕ್ಕೆ
ಪ್ರಧಾನಿಗಳ ಅಧಿಕೃತ ನಿವಾಸದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆಯಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಳ್ಳುವ ಸಾಧ್ಯತೆಯಿದೆ. ಕೇಂದ್ರದ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಬಗ್ಗೆ ಕೆಲವೊಂದು ಊಹಾಪೋಹಗಳು ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಸಭೆ ಮಹತ್ವ ಪಡೆದುಕೊಳ್ಳಲಿದೆ ಎನ್ನಲಾಗುತ್ತಿದೆ.