ಕಾಜಿರಂಗ(ಅಸ್ಸಾಂ): ಅಸ್ಸೋಂ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಬೆಳಗ್ಗೆ ಕಾಜೀರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಸವಾರಿಯನ್ನು ಮಾಡಿ ಆನಂದಿಸಿದ್ದಾರೆ.
ನಿನ್ನೆ ತೇಜ್‌ಪುರ ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ ಬಳಿಕ ಕೋವಿಂದ್ ಅವರು ಕಾಜೀರಂಗಕ್ಕೆ ಆಗಮಿಸಿದ್ದರು. ಇಂದು ಕೋಹೋರಾದಲ್ಲಿ ನಡೆಯಲಿರುವ ಅರಣ್ಯಾಧಿಕಾರಿಗಳು ಮತ್ತು ರಾಜ್ಯ ಸರ್ಕಾರದೊಂದಿಗಿನ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಬೆಳಗ್ಗೆ ಪರಿಸರದ ಅಂದವನ್ನು ಸವಿಯಲು ಅವರು ಆನೆ ಸವಾರಿ ಮಾಡಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಅವರು ಕಾಜೀರಂಗಕ್ಕೆ ಭೇಟಿ ನೀಡುವ ಕಾರಣ, ಫೆಬ್ರವರಿ 26, 27ರಂದು ರಾಷ್ಟ್ರೀಯ ಉದ್ಯಾನವನ್ನು ಸಾರ್ವಜನಿಕರಿಗೆ ಭಾಗಶಃ ಮುಚ್ಚಲಾಗಿತ್ತು. ಬುರಾಪಹಾರ್ ಮತ್ತು ಅಗೊರಟೋಲಿ ಹೊರತುಪಡಿಸಿ ಎಲ್ಲಾ ಶ್ರೇಣಿಗಳಲ್ಲಿ ಪ್ರವಾಸಿಗರಿಗೆ ಆನೆ ಮತ್ತು ಜೀಪ್ ಸಫಾರಿಯನ್ನು ಮುಚ್ಚಲಾಗುವುದು ಎಂದು ಕಾಜೀರಂಗ ರಾಷ್ಟ್ರೀಯ ಉದ್ಯಾನವನ ಪ್ರಕಟಿಸಿತ್ತು.