ನವದೆಹಲಿ: ನಾಡಿದ್ದು ನಡೆಯುವ ಬ್ರಿಟನ್ ರಾಣಿ ಎಲಿಜಬೆತ್ II ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂಗ್ಲೆಂಡ್ಗೆ ತೆರಳಿದರು. ರಾಷ್ಟ್ರಪತಿಗಳು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬರುವ ಎಲ್ಲ ದೇಶಗಳ ಗಣ್ಯರು ಸರ್ಕಾರಿ ವಿಮಾನದ ಬದಲಾಗಿ ಖಾಸಗಿ ವಿಮಾನವನ್ನು ಬಳಸಿ ಬರಲು ಬ್ರಿಟನ್ ಅರಮನೆ ಕೋರಿಕೊಂಡಿತ್ತು. ಅದರಂತೆ ದ್ರೌಪದಿ ಮುರ್ಮು ಅವರು ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್ಗೆ ಹಾರಿದರು.
ರಾಷ್ಟ್ರಪತಿಗಳಾಗಿ ಆಯ್ಕೆಯಾದ ಬಳಿಕ ಮುರ್ಮು ಅವರು ಪಯಣಿಸುತ್ತಿರುವ ಮೊದಲ ವಿದೇಶ ಪ್ರವಾಸ ಇದಾಗಿದೆ. ಭಾರತ ಸರ್ಕಾರದ ಪರವಾಗಿ ಬ್ರಿಟನ್ ರಾಣಿ ಅಗಲಿಕೆಗೆ ಸಂತಾಪ ಸೂಚಿಸಲಿದ್ದಾರೆ.
ಸೆಪ್ಟೆಂಬರ್ 19 ರಂದು ಬ್ರಿಟನ್ ರಾಣಿ ಎಲಿಜಬೆತ್- II ಅವರ ಅಂತ್ಯಕ್ರಿಯೆ ಸೆಂಟ್ರಲ್ ಲಂಡನ್ನ ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ನಡೆಯಲಿದೆ. ರಾಣಿಯ ಶವಪೆಟ್ಟಿಗೆಯನ್ನು ವಿಂಡ್ಸರ್ ಕ್ಯಾಸಲ್‌ಗೆ ಕೊಂಡೊಯ್ಯುವ ಮೂಲಕ 6ನೇ ಕಿಂಗ್ ಜಾರ್ಜ್ ಸ್ಮಾರಕ ಪ್ರಾರ್ಥನಾ ಮಂದಿರದಲ್ಲಿ ಅವರ ತಂದೆ 5ನೇ ಜಾರ್ಜ್ ಅವರ ಸಮಾಧಿಯ ಪಕ್ಕದಲ್ಲಿ ರಾಣಿಯನ್ನು ಸಮಾಧಿ ಮಾಡಲಾಗುತ್ತದೆ.
ಬ್ರಿಟನ್ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷ ಆಳ್ವಿಕೆ ನಡೆಸಿದ ಎರಡನೇ ಎಲಿಜಬೆತ್ ರಾಣಿ 96ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಸೆಪ್ಟೆಂಬರ್ 8 ರಂದು ನಿಧನರಾಗಿದ್ದರು.
ಓದಿ: ಬ್ರಿಟನ್ ರಾಣಿಯ ಅಂತ್ಯಕ್ರಿಯೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು.. 17 ರಿಂದ ಲಂಡನ್ಗೆ ಭೇಟಿ