ನವದೆಹಲಿ: ಇದೇ ಮೊದಲ ಬಾರಿಗೆ ದೇಶದಲ್ಲಿ ಗರ್ಭಿಣಿಯರು ಕೂಡಾ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಲು ಅರ್ಹರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದು, ಈ ಬಗೆಗಿನ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಲವ ಅಗರವಾಲ್, CoWIN ಆ್ಯಪ್ ಅಥವಾ ನೇರವಾಗಿ ಕೋವಿಡ್ ವ್ಯಾಕ್ಸಿನ್ ನೀಡುವ ಸೆಂಟರ್ಗಳಿಗೆ ತೆರಳಿ ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಗರ್ಭಿಣಿಯರು ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಲು ಯಾವುದೇ ತೊಂದರೆ ಇಲ್ಲ ಎಂದಿರುವ ಆರೋಗ್ಯ ಸಚಿವಾಲಯ, ಕೋವ್ಯಾಕ್ಸಿನ್, ಕೋವಿಶೀಲ್ಡ್ ಸೇರಿದಂತೆ ಲಭ್ಯವಿರುವ ವ್ಯಾಕ್ಸಿನ್ ಪಡೆಯಬಹುದು ಎಂದು ತಿಳಿಸಿದೆ. ಲಸಿಕೆ ಹಾಕಿಸಿಕೊಂಡಾಗ ಜ್ವರ, ಮೈ-ಕೈ ನೋವು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅದಕ್ಕಾಗಿ ವೈದ್ಯರ ಸಲಹೆ ಪಡೆದುಕೊಳ್ಳುವಂತೆಯೂ ಸೂಚಿಸಿದೆ.
ಕೋವಿಡ್ ಎರಡನೇ ಅಲೆ ಮುಗಿದಿಲ್ಲ- ಕೇಂದ್ರ
ಇದೇ ವೇಳೆ ಮಾತನಾಡಿರುವ ನೀತಿ ಆಯೋಗದ ಸದಸ್ಯ ವಿ.ಕೆ ಪಾಲ್, ದೇಶದಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ಮುಗಿದಿಲ್ಲ. ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಮುಕ್ತವಾಗುವವರೆಗೂ ನಾವು ಸುರಕ್ಷಿತರಲ್ಲ ಎಂದು ತಿಳಿಸಿದರು. ಕಳೆದ ಕೆಲವು ದಿನಗಳಿಂದ ಪಾಸಿಟಿವಿಟಿ ದರಗಳಲ್ಲಿ ಏರಿಕೆ ಕಂಡು ಬಂದಿದ್ದು, ಅಂತಹ ಪ್ರದೇಶಗಳಲ್ಲಿ ಹೆಚ್ಚಿನ ನಿರ್ಬಂಧ ಅಗತ್ಯ ಎಂದಿದ್ದಾರೆ.
ಭಾರತ ಇಲ್ಲಿಯವರೆಗೆ 34 ಕೋಟಿ ಜನರಿಗೆ ಕೋವಿಡ್ ವ್ಯಾಕ್ಸಿನ್ ಡೋಸ್ ನೀಡಿದೆ ಎಂದು ತಿಳಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಶೇ.10ಕ್ಕಿಂತಲೂ ಹೆಚ್ಚಿನ ಪಾಸಿಟಿವಿಟಿ ರೇಟ್ ಇರುವ ಪ್ರದೇಶಗಳ ಮೇಲೆ ನಿಗಾ ವಹಿಸುವಂತೆಯೂ ತಿಳಿಸಿದೆ.
ಡೆಲ್ಟಾ ಪ್ಲಸ್ ವಿಚಾರ
ದೇಶದಲ್ಲಿ ಇಲ್ಲಿಯವರೆಗೆ 56 ಡೆಲ್ಟಾ ಪ್ಲಸ್ ಪ್ರಕರಣಗಳು 12 ರಾಜ್ಯಗಳಲ್ಲಿ ಕಾಣಿಸಿಕೊಂಡಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.