ಪಿಲಿಭಿತ್ (ಉತ್ತರ ಪ್ರದೇಶ): ಹೊಸ ವರ್ಷದಂದು ಕುಡಿದ ಮತ್ತಿನಲ್ಲಿ ಸ್ಕೂಟಿಗೆ ಕಾರು ಡಿಕ್ಕಿಯಾಗಿ 4 ಕಿ.ಮೀ ಎಳೆದೊಯ್ದು ಯುವತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ದೇಶದಲ್ಲಿ ಸಂಚಲನ ಉಂಟು ಮಾಡಿತ್ತು. ಇದೀಗ ಉತ್ತರಪ್ರದೇಶದಲ್ಲಿ ಪತಿಯೊಬ್ಬ ಪಾನಮತ್ತನಾಗಿ ಗರ್ಭಿಣಿ ಪತ್ನಿಯನ್ನು ಬೈಕ್ಗೆ ಕಟ್ಟಿ 200 ಮೀಟರ್ ಎಳೆದೊಯ್ದು ಕ್ರೌರ್ಯ ಮೆರೆದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ: ಈ ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದ ಪಿಲಿಭಿತ್ ಜಿಲ್ಲೆಯ ಘುಂಗ್‌ಚೈ ಗ್ರಾಮದಲ್ಲಿ. ಆರೋಪಿ ರಾಮ್ಗೋಪಾಲ್ ಶನಿವಾರ ಪಾನಮತ್ತನಾಗಿ ಮನೆಗೆ ಬಂದಾಗ ಗರ್ಭಿಣಿ ಪತ್ನಿ ವಿರೋಧಿಸಿದ್ದಾಳೆ. ಇದರಿಂದ ಕುಪಿತನಾದ ಆತ, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇಷ್ಟಕ್ಕೆ ಬಿಡದ ಕ್ರೂರಿ ಆಕೆಯನ್ನು ತನ್ನ ಬೈಕ್ಗೆ ಕಟ್ಟಿ ಚಲಾಯಿಸಿಕೊಂಡು ಎಳೆದೊಯ್ದಿದ್ದಾನೆ.
ಪತ್ನಿಯನ್ನು ಎಳೆದೊಯ್ಯುತ್ತಿದ್ದುದನ್ನು ಜನರು ಕಂಡು ನಿಲ್ಲಿಸಲು ಯತ್ನಿಸಿದರೂ ಆತ, 200 ಮೀಟರ್ ದೂರ ಮಹಿಳೆಯನ್ನು ಎಳೆದೊಯ್ದಿದ್ದಾನೆ. ಮಹಿಳೆಯ ಸಹೋದರ ಬೈಕ್ ಬೆನ್ನತ್ತಿ ಸಹೋದರಿಯನ್ನು ರಕ್ಷಿಸಿದ್ದಾನೆ. ಗಾಯಗೊಂಡ ಆಕೆಯನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.
ಆರೋಪಿ ರಾಮ್ಗೋಪಾಲ್ ಮತ್ತು ಹಲ್ಲೆಗೊಳಗಾದ ಗರ್ಭಿಣಿ ಸುಮನ್ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ಜೋಡಿ ಪ್ರೀತಿಸಿ ವಿವಾಹವಾಗಿದ್ದರು ಎಂಬುದು ವಿಶೇಷ. ಮದುವೆಯಾದ ಕೆಲ ದಿನಗಳಲ್ಲಿ ಆರೋಪಿ ಡ್ರಗ್ಸ್ ಚಟಕ್ಕೆ ಬಿದ್ದಿದ್ದ. 8 ತಿಂಗಳ ಗರ್ಭಿಣಿ ಎನ್ನದೇ, ಕುಡಿತದ ಚಟವನ್ನು ಪ್ರಶ್ನಿಸಿದ್ದಕ್ಕೆ ಕ್ರೂರತ್ವ ಮೆರೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ, ಕೊಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪತ್ನಿಯ ತಲೆಗೂದಲು ಕತ್ತರಿಸಿದ್ದ ಪತಿ: ಊಟದಲ್ಲಿ ತಲೆಕೂದಲು ಕಾಣಿಸಿಕೊಂಡಿದ್ದಕ್ಕೆ ವ್ಯಗ್ರನಾದ ಪತಿಯೊಬ್ಬ ತನ್ನ ಹೆತ್ತವರ ಜೊತೆ ಸೇರಿಕೊಂಡು ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಆಕೆಯ ಕೇಶಮುಂಡನ ಮಾಡಿದ್ದ ಘಟನೆ ಉತ್ತರಪ್ರದೇಶದ ಫಿಲಿಬಿತ್ನಲ್ಲಿ ಈಚೆಗೆ ನಡೆದಿತ್ತು. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪತಿಯನ್ನು ಪೊಲೀಸರು ಬಂಧಿಸಿದ್ದರು.
ರಾತ್ರಿ ವೇಳೆ ಊಟ ಮಾಡುತ್ತಿದ್ದಾಗ ಗಂಡನ ತಟ್ಟೆಯಲ್ಲಿ ಕೂದಲು ಬಂದಿದೆ. ಇದನ್ನು ಕಂಡು ಕೋಪಗೊಂಡ ಪತಿ, ಪತ್ನಿಯನ್ನು ಹೀಯಾಳಿಸಿ ಥಳಿಸಿದ್ದಾನೆ. ಎದುರಿದ್ದರೂ ಕುಟುಂಬಸ್ಥರು ನೆರವು ನೀಡದೇ ಹಲ್ಲೆಗೆ ಪ್ರೇರೇಪಿಸಿದ್ದರು. ಬಳಿಕ ಕೂದಲು ಇಲ್ಲದಿದ್ದರೆ, ಊಟದಲ್ಲಿ ಕೂದಲು ಬರುವುದಿಲ್ಲ ಎಂದು ಪತಿ ಆಕೆಯ ಕೇಶಮುಂಡನ ಮಾಡಿ ದೌರ್ಜನ್ಯ ಎಸಗಿದ್ದ.
ಇದರಿಂದ ತೀವ್ರ ಅವಮಾನಿತಳಾದ ಮಹಿಳೆ ಗಂಡ ಮತ್ತು ಆತನ ಪೋಷಕರ ವಿರುದ್ಧ ದೂರು ನೀಡಿದ್ದರು. ವಿವಾಹದ ಬಳಿಕ ವರದಕ್ಷಿಣೆ ತರುವಂತೆಯೂ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ವರದಕ್ಷಿಣೆಗೆ ಕಿರುಕುಳ, ಹಲ್ಲೆ ಮಾಡಿದ ಆರೋಪದಡಿ ಪೊಲೀಸರು ದೂರು ದಾಖಲಿಸಿಕೊಂಡು, ಪತಿಯನ್ನು ಬಂಧಿಸಿ ಜೈಲಿಗಟ್ಟಿದ್ದರು.
ಯುವತಿಯ 4 ಕಿಮೀ ಎಳೆದೊಯ್ದಿದ್ದ ಕಾರು: ದೆಹಲಿಯ ಸುಲ್ತಾನ್‌ಪುರಿಯಲ್ಲಿ ಹೊಸ ವರ್ಷಾಚರಣೆಯಂದು ಪಾನಮತ್ತರಾಗಿದ್ದ ಐವರು ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದು ಭಯದಲ್ಲಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರು. ದುರಾದೃಷ್ಟವಶಾತ್ ಯುವತಿ ಕಾರಿನಡಿ ಸಿಲುಕಿಕೊಂಡಿದ್ದು, ಆಕೆಯ ದೇಹ ರಸ್ತೆಗೆ ಪರಚಿ ಛಿದ್ರಛಿದ್ರವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: 26 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಕೇರಳ ಶಿಕ್ಷಕ ಅರೆಸ್ಟ್: ಪೋಕ್ಸೋ ಕಾಯ್ದೆಯಡಿ ಕೇಸ್