ಹಲ್ದ್ವಾನಿ(ಉತ್ತರಾಖಂಡ) : ಉತ್ತರಾಖಂಡದ ಹಲ್ದ್ವಾನಿಯಲ್ಲಿ ತ್ರಿವಳಿ ತಲಾಖ್ ಪ್ರಕರಣ ಬೆಳಕಿಗೆ ಬಂದಿದೆ. ಬಂಭುಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರನ್ನು ತ್ರಿವಳಿ ತಲಾಖ್ ನೀಡಿ ಮನೆಯಿಂದ ಹೊರ ಹಾಕಲಾಗಿದೆ. ಈ ಸಂಬಂಧ ದೂರು ದಾಖಲಿಸಲಾಗಿದೆ.
ಸಂತ್ರಸ್ತೆ ತಾನು ಗರ್ಭಿಣಿಯಾಗಿದ್ದು, ವರದಕ್ಷಿಣೆಯಾಗಿ ಬೈಕ್ ಸಿಗದಿದ್ದಕ್ಕೆ ತನ್ನ ಗಂಡ ವಿಚ್ಛೇದನ ನೀಡಿದ್ದಾನೆ ಎಂದು ಹೇಳಿದ್ದಾಳೆ. ಆಕೆಯ ಪತಿ ಮತ್ತು ಆತನ ಪೋಷಕರು ಸೇರಿದಂತೆ ಆಕೆಯ ಅತ್ತೆಯ ಕುಟುಂಬದ ಆರು ಜನರ ವಿರುದ್ಧ ಪೊಲೀಸರು ತ್ರಿವಳಿ ತಲಾಖ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಮಾತೃಭಾಷೆಯನ್ನ ಹೆಮ್ಮೆಯಿಂದ ಮಾತನಾಡಿ - ಪ್ರಧಾನಿ ಮೋದಿ
ಮಹಿಳೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ 2021ರ ಮೇ 14ರಂದು ನಾಯ್ ಬಸ್ತಿಯ ತಾಜ್ ಮಸೀದಿಯ ನಿವಾಸಿ ಅಬ್ದುಲ್ ಖಾದಿರ್ ಅವರನ್ನು ವಿವಾಹವಾಗಿರುವುದಾಗಿ ತಿಳಿಸಿದ್ದಾರೆ. ಕುಟುಂಬಸ್ಥರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ವರದಕ್ಷಿಣೆ ನೀಡಿದ್ದರು. ಆದರೂ ಅತ್ತೆ ಮನೆಯವರು ಬೈಕ್‌ಗಾಗಿ ಬೇಡಿಕೆ ಇಡುತ್ತಲೇ ಇದ್ದರು.
ತಾನು ಎಂಟು ತಿಂಗಳ ಗರ್ಭಿಣಿಯಾಗಿದ್ದು, ಬೈಕ್ ನೀಡದಿದ್ದರೆ ಗರ್ಭಪಾತ ಮಾಡಿಸುವಂತೆ ಅವರು ಒತ್ತಡ ಹೇರುತ್ತಿದ್ದಾರೆ. ಗರ್ಭಪಾತಕ್ಕೆ ನಿರಾಕರಿಸಿದ ಕಾರಣಕ್ಕೆ ಫೆಬ್ರವರಿ 23ರಂದು ತ್ರಿವಳಿ ತಲಾಖ್ ಹೇಳಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಮಾವನಿಂದ ಲೈಂಗಿಕ ಕಿರುಕುಳ : ಅಷ್ಟೇ ಅಲ್ಲದೆ, ತನ್ನ ಸೋದರ ಮಾವನಿಂದ ಲೈಂಗಿಕ ಕಿರುಕುಳವನ್ನು ಎದುರಿಸಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಗಂಡ, ಅತ್ತೆ, ಮಾವ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.