ಫರೂಕಾಬಾದ್(ಉತ್ತರ ಪ್ರದೇಶ): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ರಾಜ್ಯ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ನಿನ್ನೆ ಹಮೀರ್ಪುರದಲ್ಲಿ ವಿದ್ಯಾರ್ಥಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬೆನ್ನಲ್ಲೇ ಇದೀಗ ಗರ್ಭಿಣಿಯೋರ್ವಳ ಮೇಲೂ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ.
ಫರೂಕಾಬಾದ್ನ ಬಸ್ ನಿಲ್ದಾಣದಲ್ಲಿ ಗರ್ಭಿಣಿಯನ್ನು ಅಪಹರಣ ಮಾಡಿರುವ ನಾಲ್ವರು, ಆಕೆಯನ್ನು ನಿರ್ಜನ ಪ್ರದೇಶದಲ್ಲಿಟ್ಟು ನಾಲ್ಕು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳ ಕೈಯಿಂದ ಹೇಗೋ ತಪ್ಪಿಸಿಕೊಂಡು ಬಂದಿರುವ ಆಕೆ ಗ್ರಾಮಸ್ಥರು ಹಾಗೂ ಪೊಲೀಸರ ಮುಂದೆ ದುಷ್ಕೃತ್ಯ ಹೇಳಿಕೊಂಡಿದ್ದಾಳೆ.
ಗರ್ಭಿಣಿ ವಿವರಿಸಿದ ದುಷ್ಕೃತ್ಯ: ಸಂತ್ರಸ್ತೆ ನೀಡಿರುವ ಮಾಹಿತಿ ಪ್ರಕಾರ, ನನ್ನ ಅತ್ತೆಯಂದಿರು ಸಹರಾನ್ಪುರದಲ್ಲಿದ್ದಾರೆ. ಆಗಸ್ಟ್ 16ರಂದು ಅಲ್ಲಿಗೆ ಹೋಗುವ ಉದ್ದೇಶದಿಂದ ಬರೇಲಿಯಿಂದ ಬಸ್ ಹಿಡಿದು ಫರೂಕಾಬಾದ್ಗೆ ಬಂದಿದ್ದೆ. ಸಂಜೆ ಆರು ಗಂಟೆ ಆಗಿದ್ದರಿಂದ ಬಸ್ಗೋಸ್ಕರ ಕಾಯುತ್ತಾ ಕುಳಿತುಕೊಂಡಿದ್ದೆ. ಈ ವೇಳೆ ಕೆಲವರು ನನ್ನ ಹತ್ತಿರ ಬಂದು ನಿಂತುಕೊಂಡರು. ಇದಾದ ಬಳಿಕ ಏನಾಯಿತೋ ಗೊತ್ತಿಲ್ಲ. ಕಣ್ಣು ತೆರೆದು ನೋಡಿದಾಗ ನಿರ್ಜನ ಪ್ರದೇಶದಲ್ಲಿನ ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು. ನನ್ನ ಮುಂದೆ ನಾಲ್ವರು ಕುಳಿತುಕೊಂಡಿದ್ದರು. ನಾನು ಕಿರುಚಾಡಲು ಶುರು ಮಾಡಿದೆ. ನನ್ನ ಮೇಲೆ ಹಲ್ಲೆ ನಡೆಸಿರುವ ಅವರು, ದುಷ್ಕೃತ್ಯವೆಸಗಿದ್ದಾರೆಂದು ಹೇಳಿದ್ದಾರೆ.
ಆರೋಪಿಗಳು ಮಲಗಿದ್ದಾಗ ಓಡಿ ಬಂದೆ: ನನ್ನ ಲಗೇಜ್ ಮುಚ್ಚಿಟ್ಟಿದ್ದಾರೆ. ನನ್ನ ಹೊಟ್ಟೆಯಲ್ಲಿ ಎರಡು ತಿಂಗಳ ಮಗುವಿದೆ. ನನಗೆ ತೊಂದರೆ ಕೊಡಬೇಡಿ ಎಂದು ಅವರಲ್ಲಿ ಮನವಿ ಮಾಡಿದ್ರೂ, ಕೇಳಲಿಲ್ಲ. ಎಲ್ಲರೂ ನನ್ನ ಮೇಲೆ ದುಷ್ಕೃತ್ಯವೆಸಗಿದರು. ಸುಮಾರು ನಾಲ್ಕು ದಿನಗಳ ಕಾಲ ಅತ್ಯಾಚಾರವೆಸಗಿದ್ದಾರೆ. ನಾಲ್ಕನೇ ದಿನ ಎಲ್ಲ ಆರೋಪಿಗಳು ಮಲಗಿದ್ದಾಗ ಕೋಣೆಯ ಬೀಗ ತೆರೆದಿತ್ತು. ಈ ವೇಳೆ ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಸುಮಾರು 12 ಕಿಲೋ ಮೀಟರ್ ದೂರ ಓಡಿ ಬಂದೆ ಎಂದು ವಿವರಿಸಿದ್ದಾರೆ.
ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ಎಸ್ಎಚ್ಒ ರಾಜೇಪುರ ದಿನೇಶ್ ಕುಮಾರ್, ಸಿಇಒ ಅಮೃತ್ ಈಗಾಗಲೇ ಆರೋಪಿಗಳಿಗೋಸ್ಕರ ಶೋಧಕಾರ್ಯ ಶುರು ಮಾಡಿದ್ದಾರೆ.
ಇದನ್ನೂ ಓದಿ: ಯುಪಿಯಲ್ಲಿ ನಿರ್ಭಯಾ ಮಾದರಿ ಕೇಸ್: ವಿದ್ಯಾರ್ಥಿನಿ ಮೇಲೆ ಕಾಮುಕರಿಂದ ರೇಪ್, ಬೆತ್ತಲೆಗೊಳಿಸಿ ಥಳಿತ
ಪೊಲೀಸರು ಹೇಳಿದ್ದೇನು?: ಪ್ರಕರಣದ ಬಗ್ಗೆ ಮಾತನಾಡಿರುವ ಪೊಲೀಸರು, ಯುವತಿಯ ಚಿಕ್ಕಮ್ಮ, ಚಿಕ್ಕಪ್ಪ ಮಹಿಳೆಯನ್ನು 80 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದು, ಫರೂಕಾಬಾದ್ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಈ ವೇಳೆ ಆಕೆಯನ್ನು ನಾಲ್ವರು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ತಿಳಿಸಿದ್ದಾರೆ. ಸಂತ್ರಸ್ತೆಗೆ ಈಗಾಗಲೇ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗ್ತಿದೆ ಎಂದಿದ್ದಾರೆ.
ನಿನ್ನೆಯಷ್ಟೇ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಮಾದರಿಯ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಪ್ರದೇಶಕ್ಕೆ ತೆರಳಿದ್ದ ವಿದ್ಯಾರ್ಥಿನಿಯ ಮೇಲೆ ಆರು ಮಂದಿ ಕಾಮುಕರು ಅತ್ಯಾಚಾರವೆಸಗಿದ್ದಷ್ಟೇ ಅಲ್ಲದೇ, ಆಕೆಯನ್ನು ಬೆತ್ತಲೆಗೊಳಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.