ಕೊಲ್ಹಾಪುರ(ಮಹಾರಾಷ್ಟ್ರ): ಮಹಾರಾಷ್ಟ್ರದ ಕೆಲವೊಂದು ಗ್ರಾಮಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಜನಸಾಮಾನ್ಯರ ಜೀವನದ ಮೇಲೆ ಇನ್ನಿಲ್ಲದ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರ ಮಧ್ಯೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರನ್ನು ಸುಮಾರು 2 ಕಿಲೋ ಮೀಟರ್ ಬಿದರಿನ ಡೋಲಿಯಲ್ಲಿ ಹೊತ್ತುಕೊಂಡು ಸಾಗಿರುವ ಘಟನೆ ನಡೆದಿದೆ.
ಕೊಲ್ಹಾಪುರದ ಭೂದರ್ಗಢ್ ತಾಲೂಕಿನ ಜೋಗೇವಾಡಿಯ ಧಂಗರ್ವಾಡಾ ಎಂಬ ಹಿಂದುಳಿದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಅನೇಕ ವರ್ಷಗಳು ಕಳೆದು ಹೋಗಿದ್ರೂ ಈ ಗ್ರಾಮಕ್ಕೆ ಮಾತ್ರ ರಸ್ತೆ ಸಂಪರ್ಕ ಲಭ್ಯವಾಗಿಲ್ಲ. ಹೀಗಾಗಿ ಅನಾರೋಗ್ಯ ಪೀಡಿತರನ್ನ ಈ ಗ್ರಾಮದಿಂದ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕಾದರೆ ಹೊತ್ತುಕೊಂಡು ಹೋಗುವುದು ಸರ್ವೆ ಸಾಮಾನ್ಯವಾಗಿದೆ. ಮಳೆಗಾಲದ ಸಂದರ್ಭದಲ್ಲಿ ಗ್ರಾಮದ ಪರಿಸ್ಥಿತಿ ಹೇಳತೀರದಾಗಿದೆ. ಸದ್ಯ ಗ್ರಾಮದಲ್ಲಿ ಮಳೆ ಸುರಿಯುತ್ತಿರುವ ಕಾರಣ ಗರ್ಭಿಣಿಯನ್ನ ಸ್ಥಳೀಯರು ಬಿದರಿನ ಡೋಲಿಯಲ್ಲಿ ಹೊತ್ತುಕೊಂಡು ಹೋಗಿದ್ದಾರೆ.
ಸುಮಾರು 200 ಜನರು ವಾಸವಾಗಿರುವ ಧಂಗರ್ವಾಡಕ್ಕೆ ಹೋಗಬೇಕಾದ್ರೆ ಎರಡು ಕಿಲೋ ಮೀಟರ್ ಬೆಟ್ಟ ಹತ್ತಬೇಕು. ಅಲ್ಲಿಂದ ಬೇರೆ ಯಾವುದೇ ಗ್ರಾಮ, ನಗರಕ್ಕೆ ತೆರಳಬೇಕಾದರೂ ಅದೇ ಬೆಟ್ಟ ಇಳಿಯಬೇಕಾಗುತ್ತದೆ. ಹೀಗಾಗಿ ಬೇರೆ ದಾರಿ ಇಲ್ಲದೇ ಜನರು ಬಿದರಿನ ಡೋಲಿಗಳ ಮೊರೆ ಹೋಗುತ್ತಾರೆ. ಇದೀಗ ಗರ್ಭಿಣಿ ಸಂಗೀತಾ ಅವರನ್ನ ಅದೇ ರೀತಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿರಿ: ಧೋನಿ ದಾಖಲೆ ಮುರಿದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್
ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾಗಿದ್ದರೂ ಗ್ರಾಮದಲ್ಲಿ ಮೂಲ ಸೌಲಭ್ಯಗಳಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದ್ದು, ಈ ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.