ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸ್ವತಂತ್ರ ಪೂರ್ವ ಭಾರತದಲ್ಲಿ ಅಗತ್ಯವಿರುವ ರೋಗಿಗಳಿಗೆ ಸಹಾಯ ಮಾಡಲೆಂದು 1943ರಲ್ಲಿ ಸ್ಥಾಪಿತವಾದ ಪಶ್ಚಿಮ ಬಂಗಾಳದ ಪೀಪಲ್ಸ್ ರಿಲೀಫ್ ಕಮಿಟಿ (ಪಿಆರ್‌ಸಿ)ಯು ಅಂದಿನಿಂದ, ಪಿಆರ್‌ಸಿ ಒಂದಲ್ಲ ಒಂದು ರೀತಿಯಲ್ಲಿ ಜನರ ಪರವಾದ ಕಾರ್ಯವನ್ನು ಮಾಡುತ್ತಲೇ ಇದೆ. ಇದೀಗ 80ನೇ ವರ್ಷಾಚರಣೆಯಲ್ಲಿರುವ ಪಿಆರ್‌ಸಿ ವರ್ಷವಿಡೀ 80 ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಯೋಜಿಸಿದೆ.
ಹೌದು, ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಕಡಿಮೆ ವೆಚ್ಚದ ರೋಗನಿರ್ಣಯ ಮತ್ತು ಕ್ಲಿನಿಕಲ್ ಸೌಲಭ್ಯಗಳನ್ನು ನಡೆಸುವ ಮೂಲಕ ವೈದ್ಯಕೀಯ ಪರಿಹಾರದ ಅತ್ಯಗತ್ಯವನ್ನು ಕಂಡು ಕೊಂಡಿರುವ ಸಂಸ್ಥೆಯು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಹರ್ನಿಯಾ ಆಪರೇಷನ್ಅನ್ನು ಕೇವಲ 50 ರೂ.ಗಳಿಗೆ ಮಾಡಲು ಮುಂದಾಗಿದೆ.
ಇದನ್ನು ಹೊರತುಪಡಿಸಿ ರಾಜ್ಯದ ವಿವಿಧೆಡೆ ಕೊಳಚೆ ಪ್ರದೇಶಗಳಲ್ಲಿ ವೈದ್ಯಕೀಯ ಶಿಬಿರ, ರಕ್ತ ಪರೀಕ್ಷೆ, ಡೆಂಗ್ಯೂ, ಮಲೇರಿಯಾ ಸೇರಿದಂತೆ ಹಲವಾರು ರೋಗಗಳ ಪತ್ತೆ ಮತ್ತು ತಡೆಗಟ್ಟುವಿಕೆಗೆ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪಿಆರ್‌ಸಿ ಕಾರ್ಯದರ್ಶಿ ಡಾ.ಫುವಾದ್ ಹಲೀಮ್ ತಿಳಿಸಿದ್ದಾರೆ.
ಪಿಆರ್‌ಸಿ ಅಧ್ಯಕ್ಷ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಕಮಲೇಶ್ವರ್ ಮುಖರ್ಜಿ ಮಾತನಾಡಿ, ಸಾಮಾನ್ಯವಾಗಿ ಹರ್ನಿಯಾ ಆಪರೇಷನ್‌ಗೆ ಕನಿಷ್ಠ 10 ಸಾವಿರ ರೂ. ಶುಲ್ಕ ಇರುತ್ತದೆ. ಆದರೆ, ಕೇವಲ 50 ರೂ.ಗೆ ಈ ಆಪರೇಷನ್ ಮಾಡಲಾಗುವುದು. ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆಯ ಗುರಿಯನ್ನೂ ಹೊಂದಿದ್ದೇವೆ. ಜೊತೆಗೆ ಕೊಳಚೆ ಪ್ರದೇಶಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗಿದೆ. ಕೋಲ್ಕತ್ತಾ ಆರೋಗ್ಯ ಯೋಜನೆಯಿಂದ ಐದು ಪಾಳಿಗಳಲ್ಲಿ ಡಯಾಲಿಸಿಸ್ ಮಾಡಲಾಗಿತ್ತು. ಅದೂ ಕೇವಲ 50 ರೂ.ಗಳಿಗೆ ಮಾಡಲಾಗಿತ್ತು. ಈಗ ಅದೇ ದರದಲ್ಲೇ ಹರ್ನಿಯಾ ಆಪರೇಷನ್ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಿಮಾಚಲ ಚುನಾವಣೆ ಕಣದಲ್ಲಿ ವೈದ್ಯ: ಪ್ರಚಾರದ ಮಧ್ಯೆ ರೋಗಿಯನ್ನು ಪರೀಕ್ಷಿಸಿದ ಬಿಜೆಪಿ ಅಭ್ಯರ್ಥಿ