ಮುಂಬೈ: ಪಾಕಿಸ್ತಾನಿ ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯ್ಕ್ ಅವರು ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಕೆಲವು ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಕೆಲವು ದಿನಗಳ ಹಿಂದೆ ಕೆಲವು ಮಾಧ್ಯಮಗಳು ಪ್ರತಾಪ್ ಸರ್ನಾಯ್ಕ್ ಪಾಕಿಸ್ತಾನಿ ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ ವರದಿ ಮಾಡಿದ್ದವು. ಈ ವರದಿಯನ್ನು ಆಧರಿಸಿ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡಾ ಪ್ರತಾಪ್ ಸರ್ನಾಯ್ಕ್ ಅವರನ್ನು ಟ್ವಿಟರ್ನಲ್ಲಿ ಟೀಕಿಸಿದ್ದರು.
ಇದನ್ನೂ ಓದಿ: ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಭೇಟಿ ಮಾಡಿದ ಕಂಗನಾ ರಣಾವತ್..!
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸರ್ನಾಯ್ಕ್ "ನನ್ನ ಬಳಿ ಯಾವುದೇ ಪಾಕಿಸ್ತಾನಿ ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ, ನನ್ನನ್ನು ಕೆಣಕುವ ಉದ್ದೇಶದಿಂದ ಸುಳ್ಳು ಸುದ್ದಿಯನ್ನು ಉದ್ದೇಶಪೂರ್ವಕವಾಗಿ ಹರಡಲಾಗಿದೆ. ಸುಳ್ಳು ಸುದ್ದಿ ಹರಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ" ಎಂದು ಸರ್ನಾಯ್ಕ್ ಹೇಳಿದ್ದಾರೆ.
ಪೊಲೀಸರ ತನಿಖೆಯ ವೇಳೆಯೂ ನನ್ನ ಬಳಿ ಪಾಕಿಸ್ತಾನಿ ಕ್ರೆಡಿಟ್ ಕಾರ್ಡ್ ಪತ್ತೆಯಾಗಿಲ್ಲ. ಈ ಸುದ್ದಿಯನ್ನು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಕೆಣಕಲು ಹರಡಿಸಲಾಗಿದೆ. ಸುದ್ದಿ ಸಂಸ್ಥೆಗಳು ಹಾಗೂ ಕಂಗನಾ ಅವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದೇನೆ. ಮತ್ತಷ್ಟು ವಿಚಾರಣೆಗೆ ತನಿಖಾ ಸಂಸ್ಥೆಯೊಂದಿಗೆ ಸಹಕರಿಸುತ್ತೇನೆ ಎಂದು ಸರ್ನಾಯ್ಕ್ ಹೇಳಿದ್ದಾರೆ.