ನವದೆಹಲಿ: ಭಾರತದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ನವದೆಹಲಿಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಮತ್ತೊಮ್ಮೆ ಭೇಟಿಯಾಗಿದ್ದಾರೆ. ಮೂಲಗಳ ಪ್ರಕಾರ, ಕಿಶೋರ್ ಮತ್ತು ಪವಾರ್ ಒಂದೂವರೆ ಗಂಟೆಗಳ ಕಾಲ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ಜೂನ್ 11 ರಂದು ಮುಂಬೈನಲ್ಲಿ ಪವಾರ್ ಅವರನ್ನು ಪ್ರಶಾಂತ್ ಕಿಶೋರ್ ಭೇಟಿ ಮಾಡಿದ್ದರು. ಅಂದಿನಿಂದ ಚರ್ಚೆಗಳು ಪ್ರಾರಂಭವಾಗಿದ್ದು, ಕೇವಲ ಒಂದು ವಾರದ ಅವಧಿಯಲ್ಲಿ ಎರಡು ಬಾರಿ ಇವರು ಭೇಟಿಯಾಗಿದ್ದಾರೆ. ಇವರ ಭೇಟಿ ಯಾವ ಕಾರಣ ಹೊಂದಿದೆ ಎಂದು ನಿರ್ದಿಷ್ಟವಾಗಿ ತಿಳಿದಿಲ್ಲವಾದರೂ, ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ಪವಾರ್ ಅವರ ನಿವಾಸದಲ್ಲಿ ನಡೆಯಲಿರುವ ಎನ್‌ಸಿಪಿಯ ಸಾಮಾನ್ಯ ಸಭೆಗೆ ಒಂದು ದಿನ ಮುಂಚಿತವಾಗಿ ಈ ಮೀಟಿಂಗ್ ನಡೆಸಲಾಗಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿನಲ್ಲಿ ಕಿಶೋರ್ ನಿರ್ಣಾಯಕ ಪಾತ್ರ ವಹಿಸಿದ್ದರು. ಆದರೆ, ಈ ಸಭೆಯು ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಎತ್ತಿಕಟ್ಟುವ ಬಗ್ಗೆ ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಇದನ್ನು ಓದಿ: 'ಕೋವಾಕ್ಸಿನ್' ತುರ್ತು ಬಳಕೆ: ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪಾಸ್ ಆಗುತ್ತಾ ಬಯೋಟೆಕ್?
ಈ ಮಹತ್ವದ ಸಭೆಯಲ್ಲಿ ಟಿಎಂಸಿ ಮುಖಂಡ ಯಶ್ವಂತ್ ಸಿನ್ಹಾ, ಜಾವೇದ್ ಅಖ್ತರ್, ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ಅಧ್ಯಕ್ಷ ಜಯಂತ್ ಚೌಧರಿ, ಜಮ್ಮು ಕಾಶ್ಮೀರ್ ಮಾಜಿ ಸಿಎಂ ಓಮರ್ ಅಬ್ದುಲ್ಲಾ, ಜೆಡಿಯು ಮಾಜಿ ನಾಯಕ ಪವನ್ ವರ್ಮಾ, ಸಿಪಿಐ ಸಂಸದ ಬಿನೊಯ್ ವಿಶ್ವ ಮತ್ತು ಇತರ ನಾಯಕರು ಭಾಗವಹಿಸಿದ್ದರು. ರಾಷ್ಟ್ರ ಮಂಚ್ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಸಭೆಯ ನಂತರ ಟಿಎಂಸಿ ಮುಖಂಡ ಯಶ್ವಂತ್ ಸಿನ್ಹಾ ಹೇಳಿದ್ದಾರೆ. ಅದೇ ಸಮಯದಲ್ಲಿ ಆರ್‌ಎಲ್‌ಡಿ ಅಧ್ಯಕ್ಷ ಜಯಂತ್ ಚೌಧರಿ ಅವರು ರೈತರ ಸಮಸ್ಯೆಗಳು, ಆರ್ಥಿಕತೆ ಮತ್ತು ಇತರೆ ರಾಷ್ಟ್ರೀಯ ವಿಷಯಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.