ಕೋಲ್ಕತ್ತಾ: ಪಂಚರಾಜ್ಯ ಚುನಾವಣೆಗಳ ಪೈಕಿ ಹೆಚ್ಚು ಕುತೂಹಲ ಹುಟ್ಟಿಸಿದ್ದ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹ್ಯಾಟ್ರಿಕ್ ಗೆಲುವು ದಾಖಲು ಮಾಡುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ದೀದಿ ಪಕ್ಷ 206ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಆದರೆ ಬಿಜೆಪಿ 84 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಇದೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಬೇಕು ಎಂಬ ಬಿಜೆಪಿ ಕನಸು ನುಚ್ಚುನೂರಾಗಿದೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪರ ಕೆಲಸ ಮಾಡಿದ್ದ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಹೇಳಿಕೆ ಇದೀಗ ಮತ್ತೊಮ್ಮೆ ನಿಜವಾಗಿದೆ. ಡಿಸೆಂಬರ್ 21ರಂದು ಮಾತನಾಡಿದ್ದ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸಹ ದಾಟುವುದಿಲ್ಲ. ಒಂದು ವೇಳೆ ಅದು ಉತ್ತಮ ಪ್ರದರ್ಶನ ನೀಡಿದ್ರೆ ನಾನು ಬೂಟ್ ಹಾಕುವುದಿಲ್ಲ. ಜತೆಗೆ ನನ್ನ ಕೆಲಸ ತ್ಯಜಿಸುತ್ತೇನೆ ಎಂದಿದ್ದರು.
ನಿಜವಾಯ್ತು ಪ್ರಶಾಂತ್ ಕಿಶೋರ್ ಭವಿಷ್ಯ
ಕಳೆದ ಕೆಲ ತಿಂಗಳ ಹಿಂದೆ ಪ್ರಶಾಂತ್ ನುಡಿದಿರುವ ಭವಿಷ್ಯ ಇದೀಗ ನಿಜವಾಗಿದೆ. ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ ತೃಣಮೂಲ ಕಾಂಗ್ರೆಸ್ 206 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಆದರೆ ಬಿಜೆಪಿ ಎರಡಂಕಿ ದಾಟಲು ತಿಣಕಾಡುತ್ತಿದೆ.
ಇದನ್ನೂ ಓದಿ: ದೀದಿ, ಡಿಎಂಕೆ, ಎಲ್ಡಿಎಫ್ ಭಾರಿ ಮುನ್ನಡೆ : ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ ಶರದ್ ಪವಾರ್
ಪಶ್ಚಿಮ ಬಂಗಾಳ ಚುನಾವಣೆ ಮಧ್ಯೆ ಪ್ರಶಾಂತ್ ಕಿಶೋರ್ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ತುಣಕುವೊಂದು ಸಿಕ್ಕಾಪಟ್ಟೆ ಸದ್ದು ಮಾಡಿತು. ಈ ಸಲ ದೀದಿ ನಾಡಲ್ಲಿ ಬಿಜೆಪಿ ಗೆಲ್ಲುವ ಎಲ್ಲ ಸಾಧ್ಯತೆಗಳು ಇವೆ ಎಂದು ಮಾತನಾಡಿದ್ದಾರೆ ಎನ್ನಲಾಗಿತ್ತು. ಆದರೆ ಈ ಆರೋಪವನ್ನ ಕಿಶೋರ್ ತಳ್ಳಿ ಹಾಕಿದ್ದರು.
ಪ್ರಶಾಂತ್ ಕಿಶೋರ್ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಡಿಎಂಕೆ ಸ್ಟಾಲಿನ್ ಪರ ಕೆಲಸ ಮಾಡಿದ್ದು, ಈ ಸಲ ಮಮತಾ ಜೊತೆ ಚುನಾವಣಾ ತಜ್ಞರಾಗಿ ಕೆಲಸ ಮಾಡಿದ್ದರು.