ಚೆನ್ನೈ (ತಮಿಳುನಾಡು): ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ಆಭರಣ ಸಮೂಹವೊಂದರ ವಿರುದ್ಧ 100 ಕೋಟಿ ರೂಪಾಯಿ ಪೋಂಜಿ ಮತ್ತು ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪ್ರಕಾಶ್ ರಾಜ್ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಿರುಚಿರಾಪಳ್ಳಿ ಮೂಲದ ಪಾಲುದಾರಿಕೆ ಸಂಸ್ಥೆಯಾದ ಪ್ರಣವ್ ಜ್ಯುವೆಲ್ಲರ್ಸ್ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ. ನವೆಂಬರ್ 20ರಂದು ಇಡಿ ಅಧಿಕಾರಿಗಳು ದಾಳಿ ನಡೆಸಿ 23.70 ಲಕ್ಷ ರೂಪಾಯಿಗಳ ನಗದು ಮತ್ತು ಕೆಲವು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ನಟರಾದ ಪ್ರಕಾಶ್ ರಾಜ್ ಈ ಜ್ಯುವೆಲ್ಲರ್ಸ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಮೂಲಗಳ ಪ್ರಕಾರ, ಇಡಿಯು ಪ್ರಕಾಶ್ ರಾಜ್ ಅವರ ಹೇಳಿಕೆಯನ್ನು ದಾಖಲಿಸಲು ಬಯಸಿದ್ದು, ಕೆಲವು ಉದ್ದೇಶಿತ ಪಾವತಿಗಳು ಮತ್ತು ಇತರ ಹಣಕಾಸಿನ ವಹಿವಾಟುಗಳ ಬಗ್ಗೆ ತಿಳಿದುಕೊಳ್ಳಲು ಇಡಿ ಮುಂದಾಗಿದೆ. ಕನ್ನಡ, ತೆಲುಗು ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಪ್ರಕಾಶ್ ರಾಜ್ ಬಿಜೆಪಿಯ ಕಟು ಟೀಕಾಕಾರರಲ್ಲಿ ಒಬ್ಬರಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿ ಸೋತಿದ್ದರು.
ಇದನ್ನೂ ಓದಿ: ಚಂದ್ರಯಾನ 3 ಕುರಿತು ಟ್ವೀಟ್: ನಟ ಪ್ರಕಾಶ್ ರಾಜ್ ವಿರುದ್ಧ ಬಾಗಲಕೋಟೆಯಲ್ಲಿ ದೂರು
ಪ್ರಕರಣದ ಹಿನ್ನೆಲೆ: ಜ್ಯುವೆಲ್ಲರ್ಸ್ ಕಂಪನಿ ವಿರುದ್ಧ ತಮಿಳುನಾಡು ಆರ್ಥಿಕ ಅಪರಾಧ ವಿಭಾಗದ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆ ನಡೆಸುತ್ತಿದೆ. ಪೊಲೀಸ್ ದೂರಿನ ಪ್ರಕಾರ, ಪ್ರಣವ್ ಜ್ಯುವೆಲ್ಲರ್ಸ್ ಹಾಗೂ ಇತರರು ಚಿನ್ನದ ಹೂಡಿಕೆ ಯೋಜನೆಯ ಹೆಸರಲ್ಲಿ ಅಧಿಕ ಲಾಭದ ಭರವಸೆ ಮೇಲೆ ಸಾರ್ವಜನಿಕರಿಂದ 100 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ಇಡಿ ತಿಳಿಸಿದೆ.
ಆದರೆ, ಹೂಡಿಕೆದಾರರಿಗೆ ಅವರ ಹಣವನ್ನು ಹಿಂದಿರುಗಿಸಲು ಪ್ರಣವ್ ಜ್ಯುವೆಲ್ಲರ್ಸ್ ವಿಫಲವಾಗಿದೆ. ಜ್ಯುವೆಲರ್ಸ್ ಸಂಸ್ಥೆ ಮತ್ತು ಇತರ ಸಂಪರ್ಕಿತ ವ್ಯಕ್ತಿಗಳು ಸಾರ್ವಜನಿಕ ಹಣವನ್ನು ಶೆಲ್ ಕಂಪನಿಗಳಿಗೆ ತಿರುಗಿಸುವ ಮೂಲಕ ವಂಚಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಬ್ಯಾಂಕ್ ಪಾವತಿಗಳ ಬದಲಿಗೆ 100 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಹೊಂದಾಣಿಕೆ ಮತ್ತು ನಕಲಿ ಎಂಟ್ರಿಗಳ ನೀಡಿರುವುದಾಗಿ ತಪ್ಪೊಪ್ಪಿಕೊಳ್ಳಲಾಗಿದೆ. ಈ ಹಿಂದೆ ದಾಳಿ ವೇಳೆ ವಿವರಿಸಲಾಗದ 23.70 ಲಕ್ಷ ರೂ. ನಗದು, 11.60 ಕೆಜಿ ತೂಕದ ಚಿನ್ನದ ಗಟ್ಟಿಗಳು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಇನ್ನೂ ಎಷ್ಟು ದಿನ ಅಂಧಭಕ್ತರನ್ನು ಸಹಿಸಿಕೊಳ್ಳಬೇಕು?: ಪ್ರಕಾಶ್ ರಾಜ್ ಟ್ವೀಟ್