ಲಖನೌ: ಪ್ರಗತಿಶೀಲ ಸಮಾಜವಾದಿ ಪಕ್ಷದ ಅಧ್ಯಕ್ಷ ಶಿವಪಾಲ್ ಯಾದವ್ ಅವರ ನಡೆ ಸಮಾಜವಾದಿ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ. ಶಿವಪಾಲ್ ಯಾದವ್, ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಟ್ವಿಟರ್ನಲ್ಲಿ ಫಾಲೋ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಿವಪಾಲ್ ಯಾದವ್ ಬಿಜೆಪಿಯ ದೊಡ್ಡ ದೊಡ್ಡ ನಾಯಕರನ್ನು ಫಾಲೋ ಮಾಡುತ್ತಿರುವುದು ಇದೇ ಮೊದಲು.
ಈ ಹಿನ್ನೆಲೆಯಲ್ಲಿ ಶಿವಪಾಲ್ ಯಾದವ್ ಅವರ ಈ ನಡೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಮಾರ್ಚ್ 26 ರಂದು ನಡೆದ ಎಸ್ಪಿ ಶಾಸಕಾಂಗ ಪಕ್ಷದ ಸಭೆಗೆ ಶಿವಪಾಲ್ ಯಾದವ್ ಅವರನ್ನು ಆಹ್ವಾನಿಸಿರಲಿಲ್ಲ. ಇದು ಯಾದವ್ ಅವರಲ್ಲಿ ಬೇಸರ ತರಿಸಿತ್ತು. ಇದೇ ಕಾರಣಕ್ಕೆ ಅವರು ಲಖನೌದಿಂದ ಇಟಾವಾಗೆ ತೆರಳಿದ್ದರು. ಅಲ್ಲಿಂದ ದೆಹಲಿಗೆ ತೆರಳಿ ಬಿಜೆಪಿಯ ಹಿರಿಯ ನಾಯಕರ ಜತೆ ಸಭೆ ನಡೆಸಿದ್ದರು.
ಸಿಎಂ ಯೋಗಿ ಆದಿತ್ಯನಾಥ ಭೇಟಿ ಮಾಡಿದ್ದ ಶಿವಪಾಲ್: ದೆಹಲಿಯಿಂದ ಲಖನೌಗೆ ಮರಳಿದ ನಂತರ ಅವರು ಸಿಎಂ ಯೋಗಿ ಆದಿತ್ಯನಾಥ್ ಮತ್ತು ಜಲಶಕ್ತಿ ಸಚಿವ ಸ್ವತಂತ್ರ ದೇವ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಶಿವಪಾಲ್ ಯಾದವ್ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳು ಹಬ್ಬಿದ್ದವು.
ಎಸ್ಪಿಯಿಂದ ದೂರವಾಗಿದ್ದ ಶಿವಪಾಲ್ ಯಾದವ್ 2022ರ ಯುಪಿ ವಿಧಾನಸಭೆ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್ ಜತೆ ಸೇರಿಕೊಂಡಿದ್ದರು. ಆ ಬಳಿಕ ಶಿವಪಾಲ್ ಯಾದವ್ ಅವರೊಂದಿಗಿನ ಮನಸ್ಥಾಪ ಕಡಿಮೆ ಆಗಿತ್ತು. ಆದರೀಗ ಮತ್ತೆ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡಿದೆ. ಶಿವಪಾಲ್ ಯಾದವ್ ಅವರ ಆಪ್ತರಿಗೆ ಟಿಕೆಟ್ ಸಿಗದಿರುವುದು ಹಾಗೂ ತಮ್ಮ ಬಗ್ಗೆ ಅಖಿಲೇಶ್ ನಿರ್ಲಕ್ಷ್ಯ ಧೋರಣೆ ತೆಳೆದಿದ್ದಾರೆ ಎಂಬ ಕಾರಣಕ್ಕೆ ಶಿವಪಾಲ್ ಯಾದವ್ ಕೋಪಗೊಂಡಿದ್ದಾರೆ.
ಅಷ್ಟೇ ಅಲ್ಲ ಶಾಸಕಾಂಗ ಪಕ್ಷದ ಸಭೆಗೆ ಕರೆಯದ ಹಿನ್ನೆಲೆ ಅಸಮಾಧಾನಗೊಂಡು, ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ ವಿಷಯ ಗಮನಕ್ಕೆ ತಂದಿದ್ದಾರೆ. ಆ ಬಳಿಕ ಅವರು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು, ಆ ಬಳಿಕ ಟ್ವಿಟರ್ನಲ್ಲಿ ಬಿಜೆಪಿ ನಾಯಕರನ್ನು ಫಾಲೋ ಮಾಡುತ್ತಿರುವುದು ಸಂಚಲನಕ್ಕೆ ಕಾರಣವಾಗಿದೆ.
ಇದನ್ನು ಓದಿ:ಹರ್ಷ ಕೊಲೆ ಪ್ರಕರಣ : ಎನ್ಐಎ ತಂಡ ಶಿವಮೊಗ್ಗಕ್ಕೆ ಭೇಟಿ, ತನಿಖೆ ಚುರುಕು