ಗುಮ್ಲಾ(ಜಾರ್ಖಂಡ್): ಬಡತನದಿಂದ ಕಂಗೆಟ್ಟ ಮಹಿಳೆಯೋರ್ವಳು ನವಜಾತ ಶಿಶುವನ್ನ 5 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಮನಕಲಕುವ ಘಟನೆ ಜಾರ್ಖಂಡ್ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗುಮ್ಲಾದ ಅಂಬೇಡ್ಕರ್ ನಗರದ ಗುಡಿಯಾದೇವಿ ಬಡತನದಲ್ಲೇ ಜೀವನ ಸಾಗಿಸುತ್ತಿದ್ದು, ವಾಸಿಸಲು ಮನೆ ಕೂಡ ಇಲ್ಲ. ಈಕೆಯ ಗಂಡ ಬಜರಂಗ ನಾಯಕ್ ದಿನವಿಡೀ ಚಿಂದಿ ಆಯುವ ಕೆಲಸ ಮಾಡಿ, ಪಾದಚಾರಿ ಮಾರ್ಗದಲ್ಲೇ ಮಲಗುತ್ತಾನೆ. ಹೀಗಾಗಿ, ಕಳೆದ ಕೆಲ ತಿಂಗಳ ಹಿಂದೆ ಜನಿಸಿರುವ ಮಗುವನ್ನ 5 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಗುಡಿಯಾ ಮತ್ತು ಬಜರಂಗ ನಾಯಕ್ಗೆ ನಾಲ್ವರು ಮಕ್ಕಳಿದ್ದಾರೆ. ಇವುಗಳ ಪೈಕಿ 9 ವರ್ಷದ ಆಕಾಶ್ ಕುಮಾರ್ ಮತ್ತು 13 ವರ್ಷದ ಖುಷಿ ಕುಮಾರಿ ಬಿಹಾರದ ಬಿಹ್ತಾದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಗುಡಿಯಾದೇವಿ ಜೊತೆಗೆ ಮೂರು ವರ್ಷದ ದೀಪಾ ಕುಮಾರಿ ಹಾಗೂ ನವಜಾತ ಶಿಶು ಉಳಿದುಕೊಂಡಿವೆ. ಕಳೆದ ಕೆಲ ದಿನಗಳ ಹಿಂದೆ ದೀಪಾ ಕುಮಾರಿಯನ್ನು ಮಾರಾಟ ಮಾಡಲು ಮುಂದಾಗಿದ್ದ ವೇಳೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಅದಕ್ಕೆ ಬ್ರೇಕ್ ಹಾಕಿದ್ದರು.
ಇದನ್ನೂ ಓದಿರಿ: TMC ಅಧ್ಯಕ್ಷೆಯಾಗಿ ಮಮತಾ ಮರು ಆಯ್ಕೆ.. 2024ರ ಲೋಕಸಭೆಯಲ್ಲಿ BJP ಸೋಲಿಸುವ ಪ್ರತಿಜ್ಞೆ!
ತಿನ್ನಲು ಊಟವಿಲ್ಲ, ಸರಿಯಾದ ಬಟ್ಟೆ ಇಲ್ಲದ ಕಾರಣ ಮೂರು ವರ್ಷದ ಮಗಳು ದೀಪಾಗೆ ಬೆಳಗ್ಗೆ ಮತ್ತು ರಾತ್ರಿ ಪಕ್ಕದ ಮನೆಯ ನಿವಾಸಿಗಳು ಆಹಾರ ನೀಡುತ್ತಾರೆ. ಇನ್ನೂ ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಗುಡಿಯಾದೇವಿಗೆ ಚಿಕಿತ್ಸೆಗೆ ಹಣವಿಲ್ಲ. ಹೀಗಾಗಿ, ನವಜಾತ ಶಿಶುವನ್ನು ಮಾರಾಟ ಮಾಡಿದ್ದಾಳಂತೆ.
ಮಗು ಮಾರಾಟದ ವಿಚಾರ ಉಪವಿಭಾಧಿಕಾರಿ ರವಿ ಆನಂದ್ ಹಾಗೂ ಜಿಲ್ಲಾಧಿಕಾರಿ ಗುಲಾಂ ಸಮ್ದಾನಿಗೆ ಗೊತ್ತಾಗುತ್ತಿದ್ದಂತೆ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಗುಡಿಯಾದೇವಿಗೆ ಅಕ್ಕಿ, ಬಟ್ಟೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಿದ್ದಾರೆ. ಮಾರಾಟ ಮಾಡಿರುವ ನವಜಾತ ಶಿಶುವನ್ನ ವಾಪಸ್ ಕರೆತರುವ ಎಲ್ಲ ವ್ಯವಸ್ಥೆ ಮಾಡಲಾಗ್ತಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ