ನವದೆಹಲಿ: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ.
ರಾಜಸ್ಥಾನದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಮಾಸ್ಕ್-ಸ್ಯಾನಿಟೈಸರ್ ಬಳಕೆ ಜಾರಿಗೊಳಿಸಿ. ಲಸಿಕೆ ಹಾಕಿಸಿಕೊಂಡ ಜನ ಮಾತ್ರ ಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಆರೋಗ್ಯ ಸಚಿವರು ಮಂಗಳವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್ ಶಿಷ್ಟಾಚಾರ ಸಾಧ್ಯವಾಗದಿದ್ದರೆ ಪಾದಯಾತ್ರೆಯನ್ನು ಮುಂದೂಡುವಂತೆ ಮಾಂಡವೀಯ ವಿನಂತಿಸಿದ್ದಾರೆ.
ಕಾಂಗ್ರೆಸ್‌ಗೆ ಕೇಂದ್ರ ಆರೋಗ್ಯ ಸಚಿವರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಪಕ್ಷದ ಸಂಸದ ಅಧೀರ್ ರಂಜನ್ ಚೌಧರಿ, ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಿದ್ದಾರೆಯೇ? ಮನ್ಸುಖ್ ಮಾಂಡವಿಯಾ ಅವರಿಗೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಇಷ್ಟವಿಲ್ಲ, ಆದರೆ ಜನರು ಅದನ್ನು ಇಷ್ಟಪಡುತ್ತಿದ್ದಾರೆ. ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಂಡವಿಯಾ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಯಾತ್ರೆಯು ಮಂಗಳವಾರ ರಾಜಸ್ಥಾನದಲ್ಲಿ ತನ್ನ ಕೊನೆಯ ದಿನದಂದು ಸಂಚರಿಸಿ ಇಂದು ಹರಿಯಾಣ ಪ್ರವೇಶಿಸಿರುವುದು ಗಮನಾರ್ಹ.
ಇಂದು ದೇಶದ ಕೋವಿಡ್-19 ಪರಿಸ್ಥಿತಿಯ ಕುರಿತು ಹಿರಿಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಚಿವ ಮನ್ಸುಖ್ ಮಾಂಡವಿಯಾ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ: ಕೋವಿಡ್-19 ಸಾವುಗಳನ್ನು ಮುಚ್ಚಿಡುತ್ತಿದೆಯಾ ಚೀನಾ? ಮಿಲಿಯನ್ ಜನ ಸಾವು ಸಾಧ್ಯತೆ?