ಪುರ್ನಿಯಾ(ಬಿಹಾರ್): ಬಡತನ ಶಾಪವಲ್ಲ, ಅದರ ಹಿಂದೆ ಅದೃಷ್ಟವೂ ಇರುತ್ತದೆ. ಯಾವ ಟೈಮಲ್ಲಿ ಏನಾಗುತ್ತೆ ಅನ್ನೋದು ಬಹುಶಃ ಆ ಭಗವಂತನಿಗೂ ಗೊತ್ತಿಲ್ಲವೇನೋ. ಬಿಹಾರದ ಆಟೋ ಚಾಲಕನೊಬ್ಬ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾನೆ. ಇದಕ್ಕೆ ಕಾರಣ ಕ್ರಿಕೆಟ್ ಬೆಟ್ಟಿಂಗ್ನ ಡ್ರೀಮ್ 11 ಆ್ಯಪ್.
ನಿಜ..! ಐಪಿಎಲ್ ಕ್ರಿಕೆಟ್ ಡ್ರೀಮ್ 11ನಲ್ಲಿ 39 ರೂಪಾಯಿ ಬೆಟ್ಟಿಂಗ್ ಮಾಡಿ ಈಗ ಕೋಟಿ ಕೋಟಿ ಹಣ ಪಡೆದಿದ್ದಾನೆ. ಆ ಅದೃಷ್ಟ ಖುಲಾಯಿಸಿದ ವ್ಯಕ್ತಿಯ ಹೆಸರು ನೌಶಾದ್ ಅನ್ಸಾರಿ. ಬಿಹಾರದ ಪುರ್ನಿಯಾ ಎಂಬಲ್ಲಿ ಆಟೋ ಓಡಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ನಡೆಯುತ್ತಿರುವ ಐಪಿಎಲ್ ಹಂಗಾಮದಲ್ಲಿ ತಮ್ಮ ಕನಸಿನ ತಂಡವನ್ನು ರಚಿಸಿದ್ದ ಆಟೋ ಚಾಲಕ, ಕೋಟಿ ಸಂಪಾದಿಸಿದ್ದಾರೆ.
ಹಣೆಬರಹ ಬದಲಿಸಿದ ಡ್ರೀಮ್ 11: ಆಟೋ ಚಾಲಕ ನೌಶಾದ್ ಅನ್ಸಾರಿ ಡ್ರೀಮ್-11 ಐಪಿಎಲ್ ತಂಡದಲ್ಲಿ ಕೇವಲ 39 ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು. ಇದರಲ್ಲಿ 1 ಕೋಟಿ ರೂಪಾಯಿಗಳ ಮೊತ್ತವನ್ನು ಗೆದ್ದಿದ್ದಾರೆ. ಐಪಿಎಲ್ ಹೇಗೆ ಕ್ರಿಕೆಟ್ ಆಟಗಾರರ ಹಣೆಬರಹವನ್ನು ಬದಲಿಸುತ್ತದೆಯೋ ಅದೇ ರೀತಿ ಆಟೋ ಚಾಲಕನ ಹಣೆಬರಹವನ್ನು ಕ್ಷಣಮಾತ್ರದಲ್ಲಿ ಬದಲಿಸಿದೆ. ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ನೌಶಾದ್ ಅವರು ತಮ್ಮ ತಂಡವನ್ನು ಡ್ರೀಮ್-11 ನಲ್ಲಿ ರಚಿಸಿದ್ದರು. ಇದಕ್ಕೆ ಬಂಪರ್ ಲಾಟರಿ ಬಂದಿದೆ. ಆಟೋ ಚಾಲಕನೆಯಿಂದ ದಿನಕ್ಕೆ 400 ರೂ.ನಂತೆ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಅದೃಷ್ಟ ಖುಲಾಯಿಸಿದ್ದು ಕೋಟಿ ಹಣ ಅವರ ಜೇಬಿಗಿಳಿದಿದೆ.
2021 ರಿಂದ ಪ್ರಯತ್ನ: ಆಟೋ ಚಾಲಕ ಮೊಹಮ್ಮದ್ ನೌಶಾದ್ ಅನ್ಸಾರಿ ಅವರು 2021 ರಿಂದ ಡ್ರೀಮ್ 11 ನಲ್ಲಿ ತಮ್ಮ ಅದೃಷ್ಟದ ಹುಡುಕಾಟದಲ್ಲಿದ್ದರು. ಈಗ ಬಂಪರ್ ಬಂದಿದೆ. ಪುರ್ನಿಯಾ ಕನ್ಹಾರಿಯಾ ಗ್ರಾಮದಲ್ಲಿಯೂ ಸಂಭ್ರಮದ ವಾತಾವರಣವಿದೆ. ಅವರು ಈವರೆಗೂ ಒಟ್ಟು 45 ತಂಡಗಳನ್ನು ಮಾಡಿದ್ದಾರೆ.
ನೌಶಾದ್ ಬ್ಯಾಂಕ್ ಖಾತೆಯನ್ನೂ ಹೊಂದಿರಲಿಲ್ಲ. ಇದೀಗ ಬಹುಮಾನದ ಹಣ ಬಂದಿದ್ದು, ಅದನ್ನು ಪಡೆಯಲು ಖಾತೆ ತೆರೆದಿದ್ದಾರೆ. ಆಟೋ ಓಡಿಸುವ ಮೂಲಕ ಅತ್ಯಲ್ಪ ಮೊತ್ತವನ್ನು ಗಳಿಸುತ್ತಿದ್ದರು. ಇದರಿಂದಾಗಿ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಯೋಚಿಸಿರಲಿಲ್ಲ. 1 ಕೋಟಿ ಗೆದ್ದ ಹಣ ಡ್ರೀಮ್ 11 ವ್ಯಾಲೆಟ್ನಲ್ಲಿ ಬಂದಿದ್ದು, ಅದರ ವರ್ಗಾವಣೆಗೆ ಆಕ್ಸಿಸ್ ಬ್ಯಾಂಕ್ನಿಂದ ಖಾತೆ ತೆರೆದು, ಏಪ್ರಿಲ್ 6 ರಂದು ಖಾತೆಗೆ 70 ಲಕ್ಷ ರೂಪಾಯಿ ಜಮೆ ಆಗಿದೆ. 30 ಲಕ್ಷ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕಡಿತವಾಗಿದೆ.
ಇಷ್ಟು ಮೊತ್ತದ ಹಣ ಗೆಲ್ಲುತ್ತೇನೆ ಎಂದು ಭಾವಿಸಿರಲಿಲ್ಲ. ಹುಚ್ಚು ಕನಸಿನ ಬೆನ್ನೇರಿದ್ದೆ. ಅದೃಷ್ಟದ ಸೆಣಸಾಟದಲ್ಲಿ ಮಿಲಿಯನೇರ್ ಆಗಲು ಸಾಧ್ಯವಾಗಿದೆ. 3 ಮಿಲಿಯನ್ ಜನರು ಇದ್ದ ಪೂಲ್ನಲ್ಲಿ ಸಣ್ಣ ಮೊತ್ತದ ನಿರೀಕ್ಷೆ ಹೊಂದಿದ್ದೆ. ಗೇಮ್ ಟ್ಯಾಲಿ ಬೋರ್ಡ್‌ನಲ್ಲಿ ನಂಬರ್ ಒನ್ ರ್ಯಾಂಕ್ ಇರುವುದು ಗೊತ್ತಾಯಿತು. ಆಟೋ ಓಡಿಸುತ್ತಿದ್ದ ನನ್ನ ಜೀವನ ಈಗ ಬದಲಾಗಲಿದೆ ಎಂದು ಆಟೋ ಚಾಲಕ ನೌಶಾದ್ ಅನ್ಸಾರಿ ಸಂತಸ ವ್ಯಕ್ತಪಡಿಸಿದ್ದಾರೆ.
ಓದಿ: 'ಸನ್ ರೈಸ್' ಆಗದಂತೆ ತಡೆದ ಕೃನಾಲ್ ಪಾಂಡ್ಯ: ಆಲ್ರೌಂಡರ್ನ 'ಸೂಪರ್' ಆಟ