ಲಂಡನ್: ವಾಹನಗಳ ಟೈರ್ ಕಣಗಳಿಂದ ಉಂಟಾಗುವ ಮಾಲಿನ್ಯದಿಂದ ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮವು ತೀವ್ರ ಕಳವಳ ಮೂಡಿಸುವಂತಿದೆ ಎಂದು ಸಂಶೋಧಕರು ಹೇಳಿದ್ದಾರೆ. ಟೈರ್ ಮಾಲಿನ್ಯವನ್ನು ನಿಯಂತ್ರಿಸಲು ಈವರೆಗೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ಆದಷ್ಟು ತ್ವರಿತವಾಗಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ. ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ಸಂಶೋಧಕರ ಪ್ರಕಾರ, ಪ್ರತಿ ವರ್ಷ ಜಾಗತಿಕವಾಗಿ ಆರು ಮಿಲಿಯನ್ ಟನ್‌ಗಳಷ್ಟು ಟೈರ್ ವೇರ್ (ಟೈರ್ ಸವೆತ) ಕಣಗಳು ಬಿಡುಗಡೆಯಾಗುತ್ತವೆ.
ಹೇಗೆ ಅಪಾಯಕಾರಿ?: ಟೈರ್‌ಗಳು ಸವೆಯುವಾಗ ಅವುಗಳಿಂದ ಕಣ್ಣಿಗೆ ಕಾಣಿಸುವ ರಬ್ಬರ್ ಕಣಗಳಿಂದ ಹಿಡಿದು ಪರಿಸರದಲ್ಲಿ ಬೇಗನೆ ಕರಗದ, ಕಣ್ಣಿಗೆ ಕಾಣಿಸದ ನ್ಯಾನೊಪಾರ್ಟಿಕಲ್‌ಗಳವರೆಗೆ ಹಲವಾರು ಮಾಲಿನ್ಯ ಕಣಗಳು ಬಿಡುಗಡೆಯಾಗುತ್ತವೆ. ಇವುಗಳು ಪಾಲಿಯಾರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು, ಬೆಂಜೊಥಿಯಾಜೋಲ್‌ಗಳು, ಐಸೊಪ್ರೆನ್ ಮತ್ತು ಸತು ಮತ್ತು ಸೀಸದಂತಹ ಭಾರವಾದ ಲೋಹಗಳನ್ನು ಒಳಗೊಂಡಂತೆ ವಿಷಕಾರಿ ರಾಸಾಯನಿಕಗಳ ಶ್ರೇಣಿಯನ್ನು ಹೊಂದಿರುತ್ತವೆ. ಇವು ಇತರ ಮಾಲಿನ್ಯಕಾರಕಗಳೊಂದಿಗೆ ಸೇರುವ ಮತ್ತು ಜೀವಿಗಳ ದೇಹದಲ್ಲಿ ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ಸಂಶೋಧಕರ ಎಚ್ಚರಿಕೆ: ಟೈರ್ನ ಸಣ್ಣ ಕಣಗಳು ಶ್ವಾಸಕೋಶದ ಆಳಕ್ಕೆ ತಲುಪುವ ಸಾಮರ್ಥ್ಯ ಹೊಂದಿವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಹೊಸ ಸಂಶೋಧನೆಗಳ ಪ್ರಕಾರ ಟೈರ್ ವೇರ್ ಕಣಗಳು ಹೃದಯ, ಶ್ವಾಸಕೋಶ, ಬೆಳವಣಿಗೆ, ಸಂತಾನೋತ್ಪತ್ತಿ ಮತ್ತು ಕ್ಯಾನ್ಸರ್ ಸೇರಿದಂತೆ ಇನ್ನೂ ಕೆಲ ಗಂಭೀರ ಅನಾರೋಗ್ಯಗಳಿಗೆ ಕಾರಣವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಮಾನವನ ಆರೋಗ್ಯದ ಮೇಲೆ ಟೈರ್ ಕಣಗಳಿಂದಾಗಬಹುದಾದ ಅನಾರೋಗ್ಯದ ಬಗ್ಗೆ ನಾವು ಇತ್ತೀಚೆಗೆ ಹೆಚ್ಚಿನ ಕಾಳಿ ಹೊಂದಿದ್ದೇವೆ. ಈ ಕಣಗಳಲ್ಲಿ ಕೆಲವು ತೀರಾ ಚಿಕ್ಕದಾಗಿರುವುದರಿಂದ ಅವುಗಳು ಗಾಳಿಯಲ್ಲಿ ತೇಲುತ್ತ ಸಾಗಬಹುದು. ಸುಮ್ಮನೆ ಪಾದಚಾರಿ ಮಾರ್ಗದಲ್ಲಿ ವಾಕ್ ಮಾಡುವಾಗಲೂ ಟೈರ್ ಮಾಲಿನ್ಯ ನಮ್ಮ ಮೇಲೆ ಪರಿಣಾಮ ಬೀರಬಹುದು ಎಂದು ಇಂಪೀರಿಯಲ್ ನ್ಯಾಷನಲ್ ಹಾರ್ಟ್ ಅಂಡ್ ಲಂಗ್ ಇನ್ ಸ್ಟಿಟ್ಯೂಟ್ ನ ಪ್ರೊಫೆಸರ್ ಟೆರ್ರಿ ಟೆಟ್ಲಿ ಹೇಳಿದ್ದಾರೆ.
ಇದಲ್ಲದೆ, ಟೈರ್ ಸವೆತದ ಕಣಗಳು ನದಿಗಳು ಮತ್ತು ಸಾಗರಗಳಲ್ಲಿನ 'ಮೈಕ್ರೋಪ್ಲಾಸ್ಟಿಕ್ಸ್' ಮಾಲಿನ್ಯ ಉಂಟು ಮಾಡುವ ಮುಖ್ಯ ಮೂಲವಾಗಿವೆ ಮತ್ತು ನಗರಗಳಲ್ಲಿ ಟೈರ್ ಕಣಗಳ ಮಾಲಿನ್ಯವು ಇತರ ಮೈಕ್ರೋಪ್ಲಾಸ್ಟಿಕ್ಗಳಿಗಿಂತ ಪರಿಸರಕ್ಕೆ ನಾಲ್ಕು ಪಟ್ಟು ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು. ಸದ್ಯ ಬಳಕೆಯಲ್ಲಿರುವ ಮಾಲಿನ್ಯ ತಡೆಯುವ ತಂತ್ರಜ್ಞಾನಗಳಾದ ಫಿಲ್ಟರ್‌ಗಳು ಮತ್ತು ಪರಿಸರ ನೀತಿಗಳು ನಮ್ಮ ಪರಿಸರವನ್ನು ಕಾಪಾಡಲು ಸಹಾಯಕವಾಗಬಹುದು. ಆದಾಗ್ಯೂ ಟೈರ್ನಿಂದ ಉಂಟಾಗುವ ಮಾಲಿನ್ಯದ ಬಗ್ಗೆ ನಮ್ಮ ಜ್ಞಾನ, ತಿಳುವಳಿಕೆ ಮತ್ತು ಟೈರ್ ಮಾಲಿನ್ಯದ ಪರಿಣಾಮಗಳ ಬಗ್ಗೆ ತಿಳಿಯುವ ಸಾಮರ್ಥ್ಯದಲ್ಲಿ ದೊಡ್ಡ ಅಂತರಗಳಿವೆ ಎಂದು ಅವರು ಹೇಳಿದರು.
ಟೈರ್ ವೇರ್ ಕಣಗಳು ಪರಿಸರವನ್ನು ಮಾಲಿನ್ಯಗೊಳಿಸುತ್ತವೆ. ನಾವು ಉಸಿರಾಡುವ ಗಾಳಿ, ರಸ್ತೆಗಳಿಂದ ಹರಿಯುವ ನೀರು ಮತ್ತು ಜಲಮಾರ್ಗಗಳು ಮತ್ತು ಕೃಷಿಯ ಮೇಲೆ ದೀರ್ಘಾವಧಿಯ ಪರಿಣಾಮಗಳನ್ನು ಉಂಟುಮಾಡುತ್ತವೆ. ನಮ್ಮ ಎಲ್ಲಾ ವಾಹನಗಳು ಇತ್ತೀಚೆಗೆ ಪಳೆಯುಳಿಕೆ ಇಂಧನಗಳ ಬದಲಿಗೆ ವಿದ್ಯುಚ್ಛಕ್ತಿಯಿಂದ ಚಾಲಿತವಾಗಿದ್ದರೂ ಸಹ, ಟೈರ್ ಸವೆತದ ಕಾರಣದಿಂದ ನಾವು ಇನ್ನೂ ಹಾನಿಕಾರಕ ಮಾಲಿನ್ಯದ ಪರಿಣಾಮ ಎದುರಿಸುತ್ತಿದ್ದೇವೆ ಎಂದು ಇಂಪೀರಿಯಲ್ ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಮುಖ ಲೇಖಕ ಝೆಂಗ್ಚು ಟಾನ್ ಹೇಳಿದ್ದಾರೆ.
ಇದನ್ನೂ ಓದಿ: ಟೈರ್‌ಗಳ ಗುಣಮಟ್ಟ, ಸುರಕ್ಷತೆಗೆ ಹೊಸ ಮಾನದಂಡಗಳನ್ನು ಪರಿಚಯಿಸಲಿರುವ ಕೇಂದ್ರ