ಛತ್ರ(ಜಾರ್ಖಂಡ್) : ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಚುನಾವಣಾ ಸಿಬ್ಬಂದಿ ತನ್ನ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಇದಕ್ಕೆ ಅವರ ಪತ್ನಿ ಸಾಥ್ ನೀಡಿದ್ದಾರೆ. ಕಾಲಿಗೆ ಪೆಟ್ಟಾಗಿ ನೋವಿನಿಂದ ಬಳಲುತ್ತಿದ್ದ ಪತಿಯನ್ನು ಪತ್ನಿ ತನ್ನ ಬೆನ್ನ ಮೇಲೆ ಹೊತ್ತು ಛತ್ರ ಕಾಲೇಜು ಆವರಣ ತಲುಪಿಸಿದ್ದಾರೆ. ಈ ದೃಶ್ಯವನ್ನು ಕಂಡವರು ಚುನಾವಣಾ ಸಿಬ್ಬಂದಿಯ ಕರ್ತವ್ಯ ನಿಷ್ಠೆ ಜೊತೆಗೆ ಪತ್ನಿಯ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.
ಛತ್ರ ಜಿಲ್ಲೆಯ ಮೂರು ಬ್ಲಾಕ್‌ಗಳಲ್ಲಿ ನಡೆಯಲಿರುವ ಮತದಾನಕ್ಕೆ(ಪಂಚಾಯತ್ ಚುನಾವಣೆ) ಸಿದ್ಧತೆಗಳು ಭರದಿಂದ ಸಾಗಿವೆ. ಚುನಾವಣಾ ಸಿಬ್ಬಂದಿ ಮನೋಜ್ ಓರಾನ್ ಪತ್ನಿಯ ಸಹಾಯದಿಂದ ಕಾಲೇಜು ಆವರಣಕ್ಕೆ ಆಗಮಿಸಿದ್ದಾರೆ. ಮನೋಜ್ ಓರಾನ್ ಮತದಾನ ಪ್ರಕ್ರಿಯೆಯ ಘಟಕವೊಂದರಲ್ಲಿ ಸಹಾಯಕನಾಗಿ ನಿಯೋಜನೆಗೊಂಡಿದ್ದರು ಎಂದು ತಿಳಿದು ಬಂದಿದೆ.
ಆದರೆ, ಇವರಿಗೆ ಇತ್ತೀಚೆಗಷ್ಟೇ ಕಾಲಿಗೆ ಪೆಟ್ಟು ಬಿದ್ದಿದ್ದು, ನೋವಿನಿಂದ ಬಳಲುತ್ತಿದ್ದರು. ಹಲವು ದಿನಗಳಿಂದ ನಡೆಯಲು ಸಾಧ್ಯವಾಗುತ್ತಿಲ್ಲ. ಹೀಗಿದ್ದರೂ ಪಂಚಾಯತ್ ಚುನಾವಣೆಯ ಕರ್ತವ್ಯದ ಆದೇಶ ನೀಡಿದೆ. ಆದೇಶವನ್ನು ಪಾಲಿಸದಿರುವುದು ಮನೋಜ್ ಅವರಿಗೆ ಸರಿಯೆನಿಸಲಿಲ್ಲ. ಹಾಗಾಗಿ, ಅವರು ಕರ್ತವ್ಯದ ಸ್ಥಳಕ್ಕೆ ಈ ರೀತಿ ತಲುಪಿದ್ದಾರೆ.
ಇದನ್ನೂ ಓದಿ: ಶರದ್ ಪವಾರ್ ಬಗ್ಗೆ ವಿವಾದಾತ್ಮಕ ಪೋಸ್ಟ್: ಮರಾಠಿ ನಟಿ ಪೊಲೀಸ್ ವಶಕ್ಕೆ
ಮನೋಜ್ ಅವರ ಹೆಂಡತಿ ತನ್ನ ಗಂಡನನ್ನು ಅವರ ಬೆನ್ನ ಮೇಲೆ ಹೊತ್ತುಕೊಂಡು ಕಾಲೇಜು ಕ್ಯಾಂಪಸ್ಗೆ ಕರೆದೊಯ್ದಿದ್ದಾರೆ. ಆದರೆ, ನಂತರ ಮನೋಜ್ ಓರಾನ್ ಅವರನ್ನು ಚುನಾವಣಾ ಕರ್ತವ್ಯಕ್ಕೆ ಕಳುಹಿಸಲಿಲ್ಲ. ವೈದ್ಯಕೀಯ ಮಂಡಳಿಯ ತಂಡವು ಅವರಿಗೆ ಬೆಡ್ ರೆಸ್ಟ್ನ ಸಲಹೆ ನೀಡಿದೆ. ಆದರೆ, ಮನೋಜ್ ಮತ್ತು ಅವರ ಪತ್ನಿಯ ಕರ್ತವ್ಯ ನಿಷ್ಠೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ. ಈ ಸ್ಥಿತಿಯಲ್ಲಿದ್ದವರನ್ನು ಏಕೆ ಮತದಾನದ ಕರ್ತವ್ಯಕ್ಕೆ ನಿಯೋಜಿಸಲಾಯಿತು ಎಂಬ ಪ್ರಶ್ನೆಯೂ ಉದ್ಭವಿಸಿದೆ.