ಕೊಲ್ಕತ್ತಾ ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯ (WBBPE) ಹೊರಗೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಅರ್ಹ ಅಭ್ಯರ್ಥಿಗಳನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದ್ದಾರೆ.
ಡಬ್ಲ್ಯೂಬಿಬಿಪಿಇ ಅಧ್ಯಕ್ಷರೊಂದಿಗೆ ನಡೆಸಿದ ಚರ್ಚೆ ಯಾವುದೇ ಫಲಿತಾಂಶವನ್ನು ನೀಡದ ಹಿನ್ನೆಲೆ ಅಭ್ಯರ್ಥಿಗಳು ಸಾಲ್ಟ್‌ಲೇಕ್‌ನ ಕರುಣಾಮೊಯಿಯಲ್ಲಿರುವ ಡಬ್ಲ್ಯೂಬಿಬಿಪಿಇ ಕೇಂದ್ರ ಕಚೇರಿಯಿಂದ 150 ಮೀಟರ್ ದೂರದಲ್ಲಿ ರಾತ್ರಿ ಇಡೀ ಧರಣಿ ನಡೆಸುತ್ತಿದ್ದರು.
ಟಿಇಟಿ ಅಭ್ಯರ್ಥಿಗಳ ಬಂಧನ: ಈ ಬಗ್ಗೆ ಡಬ್ಲ್ಯೂಬಿಬಿಪಿಇ ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರತಿಭಟನಾಕಾರರನ್ನು ಆವರಣದಿಂದ ತಕ್ಷಣ ಹೊರಹಾಕುವಂತೆ ಮನವಿ ಸಲ್ಲಿಸಿತು. ಆದರೆ ಮಂಡಳಿ ಪರವಾಗಿ ಯಾವುದೇ ಆದೇಶ ನೀಡಲು ನ್ಯಾಯಾಲಯ ನಿರಾಕರಿಸಿದೆ. ಕೋಲ್ಕತ್ತಾ ಹೈಕೋರ್ಟ್ ಸೆಕ್ಷನ್ 144 ವಿಧಿಸಲು ಅನುಮತಿ ನೀಡಿದ ಕೆಲವೇ ಗಂಟೆಗಳ ನಂತರ ಈ ಪ್ರದೇಶದಲ್ಲಿ ಹೈಡ್ರಾಮ ನಡೆದಿದೆ. ಪ್ರಾಥಮಿಕ ಶಿಕ್ಷಣ ಮಂಡಳಿಯ ಕೇಂದ್ರ ಕಚೇರಿ ಬಳಿಯಿಂದ ಪೊಲೀಸರು ಸುಮಾರು 500 ಪ್ರತಿಭಟನಾಕಾರ ಗುಂಪನ್ನು ಚದುರಿಸಿ ಹಲವರನ್ನು ಬಂಧಿಸಿದ್ದಾರೆ.
ಪೊಲೀಸರಿಂದ ಬಲಪ್ರಯೋಗ: 2014ರಲ್ಲಿ ಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಮೆರಿಟ್ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಆರಂಭದಲ್ಲಿ ಪೊಲೀಸರು ಈ ಪ್ರದೇಶವನ್ನು ತೆರವುಗೊಳಿಸಲು ಎಚ್ಚರಿಕೆ ನೀಡಿದರು. ಆದರೆ, ಸರ್ಕಾರಿ ಮತ್ತು ರಾಜ್ಯ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಬೋಧಕ ಹುದ್ದೆಗಳಿಗೆ ನೇಮಕಾತಿ ಪತ್ರ ಪಡೆದ ನಂತರ ಪ್ರತಿಭಟನೆ ಕೈಬಿಡುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಈ ವೇಳೆ, ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಕೆಲವರನ್ನು ದೈಹಿಕವಾಗಿ ನಿಂದಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. "ನಮ್ಮನ್ನು ಪೊಲೀಸರು ಬಲವಂತವಾಗಿ ಎಳೆದೊಯ್ದುರು. ಮಹಿಳೆಯರನ್ನೂ ಸಹ ದೈಹಿಕವಾಗಿ ನಿಂದಿಸಲಾಗಿದೆ ಎಂದು ಪ್ರತಿಭಟನಾಕಾರರಾದ ಶಿಲಾ ದಾಸ್ ಆರೋಪಿಸಿದ್ದಾರೆ.
ಘಟನೆಯನ್ನು ಬಿಜೆಪಿ ಖಂಡಿಸಿದೆ. ಪೊಲೀಸರು ಪ್ರತಿಭಟನಾಕಾರರನ್ನು ಥಳಿಸಿದ್ದಾರೆ ಎಂದು ಬಿಜೆಪಿ ಶಾಸಕ ಅಗ್ನಿಮಿತ್ರ ಪಾಲ್ ಆರೋಪಿಸಿದ್ದಾರೆ. ಮಹಿಳೆಯರು ಸೇರಿದಂತೆ ಯುವ ಪ್ರತಿಭಟನಾಕಾರರನ್ನು ಪೊಲೀಸರು ಥಳಿಸಿದ್ದಾರೆ. ನಾವು ಇದನ್ನು ಸಹಿಸುವುದಿಲ್ಲ. ಅಕ್ಟೋಬರ್ 21 ರಂದು ಪೊಲೀಸರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಶಾಸಕ ಅಗ್ನಿಮಿತ್ರ ಪಾಲ್ ಎಚ್ಚರಿಕೆ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧವೂ ಪಾಲ್ ವಾಗ್ದಾಳಿ ನಡೆಸಿದರು. 2014 ಮತ್ತು ನಂತರದ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ಸುಮಾರು 20,000 ಟಿಇಟಿ ಅಭ್ಯರ್ಥಿಗಳನ್ನು ನೇರವಾಗಿ ನೇಮಕ ಮಾಡುವುದಾಗಿ ಬ್ಯಾನರ್ಜಿ ಭರವಸೆ ನೀಡಿದ್ದರು. ಆದರೆ, ಈಗ ಕೇವಲ 6,100 ಹುದ್ದೆಗಳನ್ನು ಏಕೆ ಭರ್ತಿ ಮಾಡಲಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಅಕ್ಟೋಬರ್ 17 ರಿಂದ ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದರು. ಪ್ರತಿಭಟನೆ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವಂತೆ ರಾಜ್ಯ ಶಿಕ್ಷಣ ಸಚಿವ ಬ್ರತ್ಯಾ ಬಸು ಮತ್ತು ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಗೌತಮ್ ಪಾಲ್ ಅವರ ಮನವಿಯನ್ನು ಪ್ರತಿಭಟನಾಕಾರರು ತಿರಸ್ಕರಿಸಿದ್ದರು.
ರಾಜಕೀಯ ಮುಖಂಡರ ಭೇಟಿ: ಗುರುವಾರ ಪ್ರತಿಭಟನಾ ಸ್ಥಳಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಭೇಟಿ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರು ಗುರುವಾರ ಮಧ್ಯಾಹ್ನ ಭೇಟಿ ನೀಡಿದ್ದರು. ಗುರುವಾರ ಸಂಜೆ ಸಿಪಿಐ(ಎಂ) ನಾಯಕಿ ಮೀನಾಕ್ಷಿ ಮುಖರ್ಜಿ ಕೂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ಡಬ್ಲ್ಯೂಬಿಬಿಪಿಇ ಮಾಜಿ ಅಧ್ಯಕ್ಷ ಮಾಣಿಕ್ ಭಟ್ಟಾಚಾರ್ಯ ಸೇರಿದಂತೆ ಇತರ ಅಧಿಕಾರಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ.. ಟಿಎಂಸಿ ಶಾಸಕನ ಬಂಧಿಸಿದ ಇಡಿ, ದೀದಿ ಸರ್ಕಾರಕ್ಕೆ ಮತ್ತೊಂದು ಆಘಾತ