ರೋಹ್ಟಾಸ್(ಬಿಹಾರ): ದೇಶದಲ್ಲಿ ಕೋವಿಡ್ ಮಹಾಮಾರಿ ಹೆಚ್ಚಾಗಿರುವ ಸಂದರ್ಭದಲ್ಲಿ ಕೆಲವೊಂದು ರಾಜ್ಯಗಳಲ್ಲಿ ಕಠಿಣ ಲಾಕ್ಡೌನ್ ವಿಧಿಸಲಾಗಿದ್ದು, ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ.
ಬಿಹಾರದಲ್ಲೂ ಕೊರೊನಾ ಹಾವಳಿ ಹೆಚ್ಚಾಗಿದ್ದು, ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆ ಮಾಡಲು ಈಗಾಗಲೇ ಸೂಚಿಸಲಾಗಿದೆ. ಇದರ ಮಧ್ಯೆ ತರಕಾರಿ ಮಾರುಕಟ್ಟೆಯನ್ನ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲು ಮುಂದಾದ ಪೊಲೀಸರ ಮೇಲೆ ವ್ಯಾಪಾರಸ್ಥರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಅನೇಕ ಪೊಲೀಸರು ಗಾಯಗೊಂಡಿದ್ದಾರೆ. ಈ ವೇಳೆ ಜನರನ್ನ ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಇಷ್ಟು ದಿನ ಚಿಕ್ಕ ಸ್ಥಳದಲ್ಲಿ ಮಾರುಕಟ್ಟೆ ನಡೆಸಲಾಗುತ್ತಿತ್ತು. ಇದೀಗ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲು ಪೊಲೀಸರ ತಂಡ ಆಗಮಿಸಿತು. ಈ ವೇಳೆ ಕೋಪಗೊಂಡ ವ್ಯಾಪಾರಸ್ಥರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲು ಸಹ ಎಸೆದಿರುವ ಘಟನೆ ನಡೆದಿದ್ದು, ಕೆಲವರು ಗಾಯಗೊಂಡಿದ್ದಾರೆ. ಜನಸಮೂಹ ಕೋಪಗೊಳ್ಳುತ್ತಿರುವುದನ್ನ ನೋಡಿರುವ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಓಡಿ ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ಬಂಧನ ಮಾಡಲಾಗಿದೆ.