ಚಂಡೀಗಢ (ಪಂಜಾಬ್): ಖಲಿಸ್ತಾನ್ ಪ್ರತ್ಯೇಕವಾದಿ ನಾಯಕ, ವಾರಿಸ್ ಪಂಜಾಬ್ ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಮಾರ್ಚ್ 18ರಿಂದಲೂ ಪಂಜಾಬ್ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿರುವ ಸಿಂಗ್ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ. ಇದರ ನಡುವೆ ಪೊಲೀಸರಿಗೆ ಶರಣಾಗುವಂತೆ ಅಮೃತ್ಪಾಲ್ಗೆ ಚಿಕ್ಕಪ್ಪ ಹರ್ಜಿತ್ ಸಿಂಗ್ ಹೇಳಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ: 3ನೇ ದಿನಕ್ಕೆ ಕಾಲಿಟ್ಟ ಅಮೃತ್‌ಪಾಲ್ ತಲಾಶ್: ಪೊಲೀಸರಿಗೆ ಶರಣಾದ ಚಿಕ್ಕಪ್ಪ, ಚಾಲಕ
ಖಲಿಸ್ತಾನ್ ಪರ ಒಲವು ಹೊಂದುವ ಮೂಲಕ ಅಮೃತ್‌ಪಾಲ್ ಸಿಂಗ್ ಪಂಜಾಬ್ ಸರ್ಕಾರ ಮತ್ತು ಪೊಲೀಸರಿಗೆ ಸವಾಲಾಗಿದ್ದಾನೆ. ಕಳೆದ ಫೆಬ್ರವರಿಯಲ್ಲಿ ಅಮೃತ್‌ಪಾಲ್ ಸಿಂಗ್ನ ಸಹಾಯಕ ಲವ್‌ಪ್ರೀತ್‌ನನ್ನು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ಅಜ್ನಾಲ್ ಪೊಲೀಸ್ ಠಾಣೆ ಮೇಲೆ ಬೆಂಬಲಿಗರು ದಾಳಿ ನಡೆಸಿದ್ದರು. ಈ ಘಟನೆ ಸಂಬಂಧ ಅಮೃತ್‌ಪಾಲ್ ಸಿಂಗ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಈತನ ಬಂಧನಕ್ಕೆ ಮಾರ್ಚ್ 18ರಂದು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಅಂದಿನಿಂದ ಅಮೃತ್‌ಪಾಲ್ ಪಲಾಯನ ಮಾಡಿದ್ದಾನೆ.
ಇದನ್ನೂ ಓದಿ: ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ ಪರಾರಿ: ಪಂಜಾಬ್ ಪೊಲೀಸರ ಪ್ರಕಟಣೆ
ಇದೀಗ ಅಮೃತ್‌ಪಾಲ್ ಮತ್ತು ಚಿಕ್ಕಪ್ಪ ಹರ್ಜಿತ್ ಸಿಂಗ್ ಇಬ್ಬರೂ ಒಟ್ಟಿಗಿದ್ದು ಬಂಧನ ಕಾರ್ಯಾಚರಣೆ ವೇಳೆ ಜಲಂಧರ್ನಲ್ಲಿ ಬೇರ್ಪಟ್ಟಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರ ಕಾರ್ಯಾಚರಣೆ ಅರಿತ ಚಿಕ್ಕಪ್ಪ ಹರ್ಜಿತ್ ಸಿಂಗ್ ಆಗಲೇ ಶರಣಾಗಲು ನಿರ್ಧರಿಸಿದ್ದರು. ಹರ್ಜಿತ್ ಸಿಂಗ್ ತನ್ನ ಶರಣಾಗತಿಯ ಬಗ್ಗೆ ವ್ಯಕ್ತಿಯೊಬ್ಬರಿಗೆ ಹೇಳಿದ್ದ. ಅದೇ ಸಮಯದಲ್ಲಿ ಅಮೃತ್ಪಾಲ್ಗೂ ಶರಣಾಗುವಂತೆ ಸೂಚಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಆಗ ಅಮೃತ್‌ಪಾಲ್ ಸಿಂಗ್ ತನ್ನ ಚಿಕ್ಕಪ್ಪನ ಮಾತು ಕೇಳಿಲ್ಲ. ಬದಲಿಗೆ ಮತ್ತೊಬ್ಬ ಪಾಪಲ್‌ಪ್ರೀತ್ ಸಿಂಗ್ನ ಮಾತು ಕೇಳಿ ತಪ್ಪಿಸಿಕೊಳ್ಳಲು ನಿರ್ಧರಿಸಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಇದಲ್ಲದೇ, ಅಮೃತ್‌ಪಾಲ್ ಪರಾರಿಯಾಗುವ ಎಲ್ಲ ಯೋಜನೆಗಳನ್ನು ಕೆಲವೇ ಗಂಟೆಗಳಲ್ಲಿ ಸಿದ್ಧಪಡಿಸಿದ್ದು ಸಹ ಇದೇ ಪಾಪಲ್ಪ್ರೀತಿ ಎಂದೂ ತಿಳಿದು ಬಂದಿದೆ.
ಅಮೃತ್‌ಪಾಲ್‌ನಿಂದ ಬೇರ್ಪಟ್ಟ ಪಾಪಲ್‌ಪ್ರೀತ್: ಮತ್ತೊಂದೆಡೆ, ಪೊಲೀಸರ ಕಾರ್ಯಾಚರಣೆ ತೀವ್ರವಾಗುತ್ತಿದ್ದಂತೆ ಅಮೃತ್‌ಪಾಲ್ ಮತ್ತು ಪಾಪಲ್‌ಪ್ರೀತ್ ಸಹ ಬೇರ್ಪಟ್ಟಿದ್ದಾರೆ. ಹೋಶಿಯಾರ್‌ಪುರದಲ್ಲಿ ಪೊಲೀಸ್ ಕಾರ್ಯಾಚರಣೆ ಅರಿತು ಪಾಪಲ್‌ಪ್ರೀತ್ ತನ್ನ ಸಹಚರ ಜೋಗಾ ಸಿಂಗ್ ಜೊತೆಗೆ ಪರಾರಿಯಾಗಿದ್ದ. ಆದರೆ, ಈ ಘಟನೆಯ ಮರುದಿನವೇ ಪೊಲೀಸರು ಜೋಗಾ ಸಿಂಗ್‌ನನ್ನು ಸರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈ ಪಾಪಲ್‌ಪ್ರೀತ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಕಳೆದ 3-4 ವರ್ಷಗಳಿಂದ ಪಾಪಲ್‌ಪ್ರೀತ್ ಮತ್ತು ಅಮೃತ್‌ಪಾಲ್ ಒಟ್ಟಿಗೆ ಇರುವ ಯಾವುದೇ ಫೋಟೋ ಅಥವಾ ಸಿಸಿಟಿವಿ ದೃಶ್ಯಗಳು ಹೊರಬಂದಿಲ್ಲ. ಮುಂದೆ ಕೂಡ ಇಬ್ಬರು ಪರಸ್ಪರ ಭೇಟಿಯಾಗುವುದೂ ಕಷ್ಟಸಾಧ್ಯ ಎಂದು ಪೊಲೀಸರು ನಂಬಿದ್ದಾರೆ.
ವಕೀಲರಿಗೆ ಹೈಕೋರ್ಟ್ ಛೀಮಾರಿ: ಇನ್ನೊಂದೆಡೆ, ಮತ್ತೊಬ್ಬ ಭಗವಂತ್ ಸಿಂಗ್ ಕುರಿತಾಗಿ ಅಮೃತ್‌ಪಾಲ್ ಪರ ವಕೀಲರು ಹೇಬಿಯಸ್ ಅರ್ಜಿ ಸಲ್ಲಿಸಿದ್ದು, ಇದನ್ನು ಪಂಜಾಬ್ ಹರಿಯಾಣ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೇ, ಯಾವ ಆಧಾರದ ಮೇಲೆ ಈ ಅರ್ಜಿ ಸಲ್ಲಿಸಲಾಗಿದೆ?, ನಿಮಗೆ ಕಾನೂನಿನ ಮೂಲಭೂತ ಜ್ಞಾನ ಇದೆಯೇ?, ಎನ್‌ಎಸ್‌ಎ ವಿಧಿಸಿರುವ ಆರೋಪಿಗಳಿಗೆ ಹೇಬಿಯಸ್ ಅರ್ಜಿ ಹೇಗೆ ಸಲ್ಲಿಸುತ್ತಿದ್ದೀರಿ ಎಂದು ವಕೀಲರಿಗೆ ಹೈಕೋರ್ಟ್ ಛೀಮಾರಿ ಹಾಕಿದೆ.
ಯುಪಿ-ನೇಪಾಳ ಗಡಿಯಲ್ಲಿ ಶೋಧ: ಹತ್ತು ದಿನಗಳ ಹಿಂದೆ ಪೊಲೀಸರು ಉತ್ತರ ಪ್ರದೇಶದ ಪಿಲಿಭಿತ್ ಪ್ರದೇಶದಲ್ಲಿ ಅಮೃತ್‌ಪಾಲ್ ಸಿಂಗ್ ಓಡಾಡುತ್ತಿರುವುದನ್ನು ಪತ್ತೆ ಹಚ್ಚಿಸಿದ್ದಾರೆ. ಪಂಜಾಬ್ ತೊರೆದ ನಂತರ ಉತ್ತರ ಪ್ರದೇಶ ಮತ್ತು ನೇಪಾಳ ಗಡಿಯನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಹೀಗಾಗಿ ಗಡಿ ಭಾಗದಲ್ಲಿ ಪೊಲೀಸರು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪಂಜಾಬ್ ಪೊಲೀಸರಿಂದ ಅಮೃತಪಾಲ್ ಸಹಚರ ಜೋಗಾ ಸಿಂಗ್ ಬಂಧನ