ಮಥುರಾ: ಮಂಗಳವಾರ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದ ಯುವತಿ ಮೇಲೆ ಚಲಿಸುತ್ತಿದ್ದ ಕಾರಿನಲ್ಲೇ ಯುವಕರು ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಫೇಸ್‌ಬುಕ್ ಮೂಲಕ 20 ವರ್ಷದ ಯುವತಿಗೆ ಹರಿಯಾಣದ ಪಲ್ವಾಲ್‌ನಲ್ಲಿ ವಾಸಿಸುವ ತೇಜ್ವೀರ್ ಪರಿಚಯವಾಗಿದ್ದಾನೆ. ಇವರ ಪರಿಚಯ ಸ್ನೇಹಕ್ಕೆ ತಿರುಗಿದೆ. ಕೆಲವು ದಿನಗಳ ನಂತರ ಇಬ್ಬರೂ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದ್ದಾರೆ. ಈ ವೇಳೆ ಯುವತಿ ಮಂಗಳವಾರದಂದು ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆ ಬರೆಯಲು ಆಗ್ರಾಕ್ಕೆ ತೆರಳುತ್ತಿದ್ದೇನೆ ಎಂದು ತೇಜ್ವೀರ್ಗೆ ಹೇಳಿದ್ದಾಳೆ. ತೇಜ್ವೀರ್ ಸಹ ನಿನ್ನ ಜೊತೆ ಬರುವುದಾಗಿ ಕೇಳಿ ಕೊಂಡಿದ್ದನು. ಯುವತಿ ಸಹ ಒಪ್ಪಿಗೆ ನೀಡಿದ್ದಳು ಎನ್ನಲಾಗಿದೆ.
ತೇಜ್ವೀರ್ ಜೊತೆಗೆ ತೆರಳಿದ್ದ ಯುವತಿ ಮಂಗಳವಾರದಂದು ಸಬ್ ಇನ್ಸ್ಪೆಕ್ಟರ್ ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷೆ ಮುಗಿದ ಬಳಿಕ ತೇಜ್ವೀರ್ ಮತ್ತು ಆತನ ಸ್ನೇಹಿತರೊಂದಿಗೆ ಯುವತಿ ಕಾರಿನಲ್ಲಿ ಬರುತ್ತಿದ್ದಳು.
ಈ ವೇಳೆ ಯುವತಿಗೆ ತೇಜ್ವೀರ್ ನಶೆ ಪದಾರ್ಥ ಸೇವಿಸಲು ಕೊಟ್ಟಿದ್ದಾನೆ. ಇದನ್ನು ಸೇವಿಸಿದ ಯುವತಿ ಮೂರ್ಛೆ ಹೋಗಿದ್ದಾಳೆ. ಈ ವೇಳೆ ಚಲಿಸುತ್ತಿದ್ದ ಕಾರಿನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಸ್ವಸ್ಥಗೊಂಡ ಯುವತಿಯನ್ನು ಆಗ್ರಾ-ದೆಹಲಿ ಹೆದ್ದಾರಿಯಲ್ಲಿ ಬಿಟ್ಟು ಹೋಗಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬುಧವಾರ ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಗಳ ವಿರುದ್ಧ ಕೋಸಿಕಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದ್ದರು. ಪ್ರಮುಖ ಆರೋಪಿಯನ್ನು ಗುರುವಾರ ಮುಂಜಾನೆ ಪೊಲೀಸರು ಬಂಧಿಸಿದ್ದಾರೆ. ಇತರ ಸಹಚರರಿಗಾಗಿ ಹೆಚ್ಚಿನ ಶೋಧ ನಡೆಸುತ್ತಿದ್ದಾರೆ.