ಗಾಜಿಪುರ: ಇತ್ತೀಚೆಗೆ ಗಂಗಾ ನದಿಯಲ್ಲಿ ಸಾಲು ಸಾಲು ಹೆಣಗಳು ತೇಲಿ ಬರುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೃತದೇಹಗಳ ಶವ ಸಂಸ್ಕಾರ ಮಾಡಲು ಸಾಧ್ಯವಾಗದಿದ್ದರೆ ಅಧಿಕಾರಿಗಳಿಗೆ ತಿಳಿಸಿ. ನದಿಗಳಿಗೆ ಎಸೆಯಬೇಡಿ ಎಂದು ಜನರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
ಶವಗಳನ್ನು ದಹಿಸಲು ಕ್ವಿಂಟಲ್ ಕಟ್ಟಿಗೆ 650 ರೂ., ಸುಡಲು 500 ರೂ ದರ ನಿಗದಿ ಪಡಿಸಿ ಯುಪಿ ಸರ್ಕಾರ ಆದೇಶಿಸಿದೆ. ಆದರೂ, ಹೆಣಗಳು ಮಾತ್ರ ನದಿಯಲ್ಲಿ ತೇಲಿಬರುತ್ತಿರುವುದಕ್ಕೆ ಜನರು ಭಯ ಭೀತರಾಗಿದ್ದಾರೆ.
ನದಿಗಳಲ್ಲಿ ಶವಗಳನ್ನ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ಸಿಎಂ ಯೋಗಿ ಆದಿತ್ಯನಾಥ್, ನದಿಗಳ ದಡದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ದಳ (ಎಸ್‌ಡಿಆರ್‌ಎಫ್) ಹಾಗೂ ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಗೆ ಗಸ್ತು ತಿರುಗಲು ಆದೇಶಿಸಿದ್ದಾರೆ.
ನದಿಗಳಲ್ಲಿ ಯಾವುದೇ ಶವಗಳನ್ನು ವಿಲೇವಾರಿ ಮಾಡದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಗ್ರಾಮದ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮದ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಸಾವಿಗೀಡಾದವರೆಲ್ಲರೂ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಅರ್ಹರು. ಅಂತಿಮ ವಿಧಿವಿಧಾನ ನೆರವೇರಿಸಲು ಈಗಾಗಲೇ ರಾಜ್ಯ ಸರ್ಕಾರವು ಹಣವನ್ನು ಮಂಜೂರು ಮಾಡಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.