ನವದೆಹಲಿ: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ಮಾಡಿರುವ ತಿದ್ದುಪಡಿ ಹಾಗೂ ನಿಯಮಗಳ ಅನುಸಾರವಾಗಿ ಮಹಾರಾಷ್ಟ್ರದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
2018ರಲ್ಲಿ ಬಾಂಬೆ ಹೈಕೋರ್ಟ್ ಎತ್ತಿನ ಗಾಡಿ ಓಟದ ಸ್ಪರ್ಧೆ ವಿರುದ್ಧ ನೀಡಿದ ತಡೆಯಾಜ್ಞೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಂ ಖಾನ್ವಿಲಾರ್ ಹಾಗೂ ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ.
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಇದೇ ರೀತಿಯ ಸ್ಪರ್ಧೆಗಳು ನಡೆಯುತ್ತಿರುವುದರಿಂದ ಮಹಾರಾಷ್ಟ್ರದಲ್ಲಿ ಎತ್ತಿನಗಾಡಿ ಓಟದ ಮೇಲಿನ ನಿಷೇಧವನ್ನು ಹಿಂಪಡೆಯಬೇಕು ಎಂದು ಮಹಾರಾಷ್ಟ್ರ ಸರ್ಕಾರ ನಿನ್ನೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. 2017ರ ನಿಯಮಗಳ ಪ್ರಕಾರ ಎತ್ತಿನಗಾಡಿ ಓಟದ ಸ್ಪರ್ಧೆ ನಡೆಸಲು ಅವಕಾಶ ನೀಡಬೇಕು ಎಂದು ಈ ನ್ಯಾಯ ಪೀಠಕ್ಕೆ ಮಹಾ ಸರ್ಕಾರ ಮನವಿ ಮಾಡಿತ್ತು.
ಮಹಾರಾಷ್ಟ್ರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಕಟ್ಟುನಿಟ್ಟಿನ ನಿಯಮಾವಳಿಗಳ ಅಡಿಯಲ್ಲಿ ಎತ್ತಿನಗಾಡಿ ಓಟವನ್ನು ನಡೆಸಲು ರಾಜ್ಯ ಸರ್ಕಾರ ಬಯಸಿದೆ. ಆದರೆ ಇದಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ ಎಂದು ಹೇಳಿದರು. ನಿಷೇಧವನ್ನು ತೆಗೆದುಹಾಕಿ 2017 ರ ನಿಯಮಗಳ ಪ್ರಕಾರ ಎತ್ತಿನ ಗಾಡಿ ಓಟದ ಸ್ಪರ್ಧೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಮಧ್ಯಂತರ ಅರ್ಜಿ ವಿಚಾರಣೆ ವೇಳೆ ವಾದಗಳನ್ನು ಆಲಿಸಿದ ಕೋರ್ಟ್ ಮಹಾರಾಷ್ಟ್ರದಲ್ಲಿ ಎತ್ತಿನಗಾಡಿ ಓಟಕ್ಕೆ ಅನುಮತಿ ನೀಡಿತು.
ಇದನ್ನೂಓದಿ: ಶೀನಾ ಬೋರಾ ಕಾಶ್ಮೀರದಲ್ಲಿ ಜೀವಂತ: ಸಿಬಿಐಗೆ ಅಚ್ಚರಿಯ ಪತ್ರ ಬರೆದ ಆರೋಪಿ ಇಂದ್ರಾಣಿ ಮುಖರ್ಜಿ!