ನವದೆಹಲಿ: ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವುದೇ ಪೋಕ್ಸೋ ಕಾಯ್ದೆಯ ಉದ್ದೇಶ. ಆದರೆ ಇದು ಯುವ ವಯಸ್ಕರ ನಡುವಿನ ಸಮ್ಮತಿಯ ಪ್ರಣಯ ಸಂಬಂಧವನ್ನು ಅಪರಾಧೀಕರಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಒತ್ತಡದಿಂದ ರಾಜಿ ಮಾಡಿಕೊಳ್ಳುವ ಸನ್ನಿವೇಶ ಎದುರಾಗುವುದರಿಂದ ಇಂಥ ಸಂಬಂಧಗಳ ಸ್ವರೂಪವನ್ನು ಪ್ರತಿಯೊಂದು ಪ್ರಕರಣದಲ್ಲಿನ ಸಂಗತಿಗಳು ಮತ್ತು ಆಯಾ ಸಂದರ್ಭಗಳ ದೃಷ್ಟಿಯಿಂದ ನೋಡಬೇಕು ಎಂದು ಕೋರ್ಟ್ ಹೇಳಿದೆ.
17 ವರ್ಷದ ಬಾಲಕಿಯನ್ನು ಮದುವೆಯಾಗಿ, ಪೋಕ್ಸೊ ಕಾಯ್ದೆಯಡಿ ಬಂಧಿತನಾದ ಬಾಲಕನಿಗೆ ಜಾಮೀನು ನೀಡುವ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಮೇಲಿನಂತೆ ಉಲ್ಲೇಖ ಮಾಡಿದೆ.
ಪ್ರಸ್ತುತ ಪ್ರಕರಣದಲ್ಲಿ, ಬಾಲಕನೊಂದಿಗಿನ ಸಂಬಂಧಕ್ಕೆ ಬಾಲಕಿಯನ್ನು ಬಲವಂತಪಡಿಸಲಾಗಿಲ್ಲ ಎಂಬುದನ್ನು ಗಮನಿಸಿದ ಕೋರ್ಟ್, ಅವರ ಹೇಳಿಕೆಯಿಂದ ಇಬ್ಬರ ನಡುವೆ ಪ್ರಣಯ ಸಂಬಂಧವಿತ್ತು ಮತ್ತು ಅವರ ನಡುವಿನ ಲೈಂಗಿಕ ಕ್ರಿಯೆಯು ಒಪ್ಪಿಗೆಯಿಂದ ಕೂಡಿದ್ದು ಸ್ಪಷ್ಟವಾಗಿದೆ ಎಂದು ಹೇಳಿದೆ.
ನನ್ನ ಅಭಿಪ್ರಾಯದಲ್ಲಿ, ಪೋಕ್ಸೋ ಕಾಯ್ದೆಯ ಉದ್ದೇಶವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವುದಾಗಿದೆ. ಇದು ಯುವ ವಯಸ್ಕರ ನಡುವಿನ ಸಹಮತದ ಪ್ರಣಯ ಸಂಬಂಧಗಳನ್ನು ಅಪರಾಧೀಕರಿಸಲು ಎಂದಿಗೂ ಉದ್ದೇಶಿಸಿಲ್ಲ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಆದೇಶದಲ್ಲಿ ತಿಳಿಸಿದ್ದಾರೆ.
ಹಾಗಾಗಿ, ಇದು ಬಾಲಕನೊಂದಿಗಿನ ಸಂಬಂಧಕ್ಕೆ ಬಾಲಕಿಯನ್ನು ಒತ್ತಾಯಿಸಿದ ಪ್ರಕರಣವಲ್ಲ. ವಾಸ್ತವವಾಗಿ, 'ಎ' ಎಂಬಾಕೆ ಸ್ವತಃ ಅರ್ಜಿದಾರರ ಮನೆಗೆ ಹೋಗಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ ಎಂದು ಸಂತ್ರಸ್ತೆಯ ಹೇಳಿಕೆ ಸ್ಪಷ್ಟಪಡಿಸುತ್ತದೆ. ಇದು ಇಬ್ಬರ ನಡುವಿನ ಪ್ರಣಯ ಸಂಬಂಧವಾಗಿದೆ ಮತ್ತು ಅವರ ನಡುವಿನ ಲೈಂಗಿಕ ಕ್ರಿಯೆಯು ಒಪ್ಪಿಗೆಯಿಂದ ಕೂಡಿದೆ ಎಂದು ಅದು ಹೇಳಿದೆ.
ಆದಾಗ್ಯೂ, ಪ್ರತಿ ಪ್ರಕರಣದ ಸತ್ಯಗಳು ಮತ್ತು ಸಂದರ್ಭಗಳಿಂದ ಇದನ್ನು ನೋಡಬೇಕು. ಲೈಂಗಿಕ ಅಪರಾಧದಿಂದ ಬದುಕುಳಿದಿರುವವರು ಒತ್ತಡ ಅಥವಾ ಆಘಾತದಿಂದ ರಾಜಿ ಇತ್ಯರ್ಥ ಮಾಡಿಕೊಳ್ಳುವಂತೆ ಒತ್ತಾಯಿಸಲ್ಪಡಬಹುದು ಎಂದು ನ್ಯಾಯಾಧೀಶರು ಹೇಳಿದರು. ಜಾಮೀನು ನೀಡುವಾಗ ಪ್ರೀತಿಯಿಂದ ಆರಂಭವಾದ ಒಮ್ಮತದ ಸಂಬಂಧವನ್ನು ಪರಿಗಣಿಸಬೇಕು ಮತ್ತು ಪ್ರಸ್ತುತ ಪ್ರಕರಣದಲ್ಲಿ ಆರೋಪಿಯು ಜೈಲಿನಲ್ಲಿರುವಂತೆ ಮಾಡುವುದು ನ್ಯಾಯದ ಅಪಹಾಸ್ಯ ಎಂದು ನ್ಯಾಯಾಲಯ ಗಮನಿಸಿತು.
ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವಳಾಗಿದ್ದು ಆಕೆಯ ಒಪ್ಪಿಗೆ ಯಾವುದೇ ಕಾನೂನುಬದ್ಧತೆಯನ್ನು ಹೊಂದಿಲ್ಲ. ಆದಾಗ್ಯೂ ಜಾಮೀನು ನೀಡುವಾಗ ಪ್ರೀತಿಯಿಂದ ಹುಟ್ಟಿಕೊಂಡ ಒಮ್ಮತದ ಸಂಬಂಧದ ಅಂಶವನ್ನು ಪರಿಗಣಿಸಬೇಕು ಎಂಬುದು ನನ್ನ ಅಭಿಪ್ರಾಯ. ಈ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ನಿರ್ಲಕ್ಷಿಸಿ ಆರೋಪಿಯು ಜೈಲಿನಲ್ಲಿ ನರಳುವಂತೆ ಮಾಡುವುದು ನ್ಯಾಯದ ವಿಕೃತತೆಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತು.
ವೈಯಕ್ತಿಕ ಬಾಂಡ್ ಮತ್ತು ತಲಾ 10,000 ರೂ.ಗಳ ಶ್ಯೂರಿಟಿ ಬಾಂಡ್ ಮೇಲೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಿತು. ಆರೋಪಿಯು ತನಿಖೆಗೆ ಹಾಜರಾಗುವಂತೆ, ಪಾಸ್‌ಪೋರ್ಟ್ ಒಪ್ಪಿಸುವಂತೆ ಮತ್ತು ಯಾವುದೇ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಪೋಕ್ಸೊ ಕಾಯ್ದೆ ದುರ್ಬಳಕೆ ಅಪಾಯಕಾರಿ: ಈ ಬಗ್ಗೆ ತಜ್ಞರು ಹೇಳಿದ್ದಿಷ್ಟು!