ಮಲಪ್ಪುರಂ (ಕೇರಳ): ಬಾಲಕಿಯೊಬ್ಬಳು 13ನೇ ವರ್ಷದವಳಿದ್ದಾಗ ಆಕೆಯ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ನಡೆದಿತ್ತು. ಇದೀಗ ಮೂರನೇ ಬಾರಿಗೆ ದೌರ್ಜನ್ಯ ಎಸಗಲಾಗಿದೆ ಎಂದು ಆಕೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
ಚಿಲ್ಡ್ರನ್ ಹೋಂ ಕೇರ್ನಿಂದ ತನ್ನ ಮನೆಗೆ ತೆರಳಿದ ನಂತರ ಮೂರನೇ ಬಾರಿಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು 17 ವರ್ಷದ ಬಾಲಕಿ ಪಾಂಡಿಕಾಡ್ ಪೊಲೀಸ್ ಠಾಣೆಯಲ್ಲಿ ಹೇಳಿಕೆ ದಾಖಲಿಸಿದ್ದಾಳೆ.
ಬಾಲಕಿ 13 ವರ್ಷದವಳಾಗಿದ್ದಾಗ ಅಂದರೆ 2016 ಮತ್ತು 2017ರಲ್ಲಿ ಆಕೆಯ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ನಡೆದಿತ್ತು. ಆಗ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಬಳಿಕ ಬಾಲಕಿ 'ನಿರ್ಭಯಾ ಮನೆ'ಗೆ ಸ್ಥಳಾಂತರ ಮಾಡಲಾಗಿತ್ತು. ಅದಾದ ನಂತರ ಆಕೆಯನ್ನು ಸಂಬಂಧಿಕರಿಗೆ ಒಪ್ಪಿಸಲಾಗಿತ್ತು
ಆದರೆ ಚಿಲ್ಡ್ರನ್ ಹೋಂ ಕೇರ್ಗಳಿಂದ ಸಂಬಂಧಿಕರಿಗೆ ಆಕೆಯನ್ನು ಒಪ್ಪಿಸಿದ ಬಳಿಕ ನಡೆದ ಲೈಂಗಿಕ ದೌರ್ಜನ್ಯವನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಮಕ್ಕಳ ರಕ್ಷಣಾ ಅಧಿಕಾರಿ, ಆಶ್ರಯ ಮನೆಯಲ್ಲಿ ಕ್ಷೇತ್ರಕಾರ್ಯಕರ್ತರು ಮತ್ತು ಪೊಲೀಸ್ ಅಧಿಕಾರಿಯ ನಿರ್ಲಕ್ಷ್ಯ ಕಾರಣ ಎನ್ನಲಾಗುತ್ತಿದೆ. ಈ ಮಧ್ಯೆ ಮಲಪ್ಪುರಂ ಜಿಲ್ಲೆಯಲ್ಲಿ 29 ಹೊಸ ಪೋಕ್ಸೊ ಪ್ರಕರಣಗಳು ದಾಖಲಾಗಿವೆ.