ನವದೆಹಲಿ : 2021-22ರ ಹಣಕಾಸು ವರ್ಷದಲ್ಲಿ ಎಟಿಎಂ ವಹಿವಾಟು ಶುಲ್ಕಗಳಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್(PNB) ಗಳಿಸಿದ ಆದಾಯವು 645.67 ಕೋಟಿ ರೂಪಾಯಿಗಳಷ್ಟಿದೆ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಡಿ ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಬ್ಯಾಂಕ್ ತಿಳಿಸಿದೆ.
ಮಧ್ಯಪ್ರದೇಶ ಮೂಲದ ಆರ್‌ಟಿಐ ಅರ್ಜಿದಾರ ಚಂದ್ರಶೇಖರ್ ಗೌರ್‌ಗೆ ಬ್ಯಾಂಕ್‌ನ ಪ್ರತಿಕ್ರಿಯೆಯ ಪ್ರಕಾರ, 'ದೇಶದ ಎರಡನೇ ಅತಿದೊಡ್ಡ ಸಾಲದಾತ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅಥವಾ ತ್ರೈಮಾಸಿಕ/ಮಾಸಿಕ ಸರಾಸರಿ ಬ್ಯಾಲೆನ್ಸ್ ನಿರ್ವಹಿಸಲು ವಿಫಲರಾದ ಗ್ರಾಹಕರಿಂದ ದಂಡದ ರೂಪದಲ್ಲಿ 239.09 ಕೋಟಿ ರೂ.ಸಂಗ್ರಹಿಸಿದೆ.
2020-21ರಲ್ಲಿ ತಮ್ಮ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದಕ್ಕಾಗಿ ಗ್ರಾಹಕರಿಗೆ ಶುಲ್ಕ ವಿಧಿಸುವ ಮೂಲಕ ಬ್ಯಾಂಕ್ 170 ಕೋಟಿ ರೂ. ಗಳಿಸಿದೆ. ಹಣಕಾಸು ವರ್ಷ 2022ರ ಅವಧಿಯಲ್ಲಿ ಈ ಮೊತ್ತವನ್ನು 8,518,953 ಖಾತೆಗಳಿಂದ ಸಂಗ್ರಹಿಸಲಾಗಿದೆ. ಬ್ಯಾಂಕ್‌ನಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆಗಳ ಸಂಖ್ಯೆಯ ಕುರಿತಾದ ಪ್ರಶ್ನೆಗೆ, ಮಾರ್ಚ್ 31, 2022ರಂತೆ ಒಟ್ಟು 67,637,918 ಖಾತೆಗಳಿವೆ ಎಂದು ಪಿಎನ್ಬಿ ಹೇಳಿದೆ.
2018-19ರಿಂದ 2021-22ರವರೆಗಿನ ಕಳೆದ ನಾಲ್ಕು ಹಣಕಾಸು ವರ್ಷಗಳ ಟ್ರೆಂಡ್‌ನ ಪ್ರಕಾರ, ಪಿಎನ್ಬಿಯಲ್ಲಿನ ಶೂನ್ಯ ಬ್ಯಾಲೆನ್ಸ್ ಖಾತೆಗಳು ಈ ವರ್ಷಗಳಲ್ಲಿ ಸ್ಥಿರವಾಗಿ ಹೆಚ್ಚಿವೆ ಎಂದು ತಿಳಿದು ಬಂದಿದೆ. ಮಾರ್ಚ್ 31, 2019ರಂತೆ ಬ್ಯಾಂಕ್‌ನಲ್ಲಿ 28,203,379 ಶೂನ್ಯ ಬ್ಯಾಲೆನ್ಸ್ ಖಾತೆಗಳಿದ್ದವು. ಇದು ಮಾರ್ಚ್ 2020ರ ಅಂತ್ಯದ ವೇಳೆಗೆ 30,583,184ಕ್ಕೆ ಮತ್ತು ಮಾರ್ಚ್ 31, 2021ರಂತೆ 59,496,731ಕ್ಕೆ ಏರಿತು.
ಇದನ್ನೂ ಓದಿ: ಅಬಕಾರಿ ತೆರಿಗೆ ಕಡಿತ ಬಳಿಕ ದೇಶಾದ್ಯಂತ ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ..