ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಉಂಟಾದ ಪ್ರಕರಣದ ವಿಚಾರಣೆಯನ್ನು ನಾಳೆ ಶುಕ್ರವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಕೈಗೆತ್ತಿಕೊಳ್ಳಲಿದೆ.
ಘಟನೆ ಸಂಬಂಧ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಯಬೇಕು ಮತ್ತು ಈ ರೀತಿಯ ಉಲ್ಲಂಘನೆ ಇನ್ಮುಂದೆ ನಡೆಯಬಾರದು ಎಂದು ಹಿರಿಯ ವಕೀಲ ಮಣಿಂದರ್ ಸಿಂಗ್ ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಶುಕ್ರವಾರ ವಿಚಾರಣೆ ನಡೆಸುವುದಾಗಿ ಸಿಜೆಐ ತಿಳಿಸಿದ್ದಾರೆ. ಅಲ್ಲದೇ ತಮ್ಮ ಅರ್ಜಿಯ ಪ್ರತಿಯನ್ನು ಪಂಜಾಬ್ ರಾಜ್ಯ ಸರ್ಕಾರಕ್ಕೂ ಸಲ್ಲಿಸುವಂತೆ ಮಣಿಂದರ್ ಸಿಂಗ್ಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ನಿನ್ನೆ ಪಂಜಾಬ್ನ ಫಿರೋಜ್‌ಪುರದಲ್ಲಿ ಆಯೋಜನೆಗೊಂಡಿದ್ದ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಕೆಲ ಪ್ರತಿಭಟನಾಕಾರರು ರಸ್ತೆಯನ್ನು ಅಡ್ಡಗಟ್ಟಿದ್ದರು. ಈ ವೇಳೆ ಮೋದಿ ತಮ್ಮ ಬೆಂಗಾವಲು ಪಡೆಯೊಂದಿಗೆ ಫ್ಲೈಓವರ್ನಲ್ಲೇ ಸುಮಾರು 20 ನಿಮಿಷಗಳ ಕಾಲ ಕಳೆಯಬೇಕಾಯಿತು. ಬಳಿಕ ರ್‍ಯಾಲಿಯಲ್ಲಿ ಭಾಗಿಯಾಗದೇ ಪ್ರಧಾನಿ ದೆಹಲಿಗೆ ವಾಪಸ್ ಆಗಿದ್ದರು.
ಇದನ್ನೂ ಓದಿ: Modi Security Breach: ಬ್ಲೂ ಬುಕ್ ಪಾಲಿಸಿಲ್ಲ ಎಂದ ಅಧಿಕಾರಿ.. ಕಾರ್ಯಕರ್ತರಿಗೆ ಥಳಿಸಿ, ಊಟದ ಬಾಕ್ಸ್ ಕಸಿದರು ಎಂದ ಸಂಸದೆ
ದೇಶದ ಪ್ರಧಾನಿಗೆ ಭದ್ರತಾ ಲೋಪವಾಗಿದೆ ಎಂದು ದೇಶಾದ್ಯಂತ ಬಿಜೆಪಿ ನಾಯಕರು ಪಂಜಾಬ್ನ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇನ್ನು ಘಟನೆ ಸಂಬಂಧ ತನಿಖೆ ನಡೆಸಲು ಪಂಜಾಬ್ ಸರ್ಕಾರ ಕೂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.