ಪುಣೆ(ಮಹಾರಾಷ್ಟ್ರ) : ಮಹಾರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇಂದು ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಕೂಡ ವೇದಿಕೆ ಹಂಚಿಕೊಂಡು ಕುತೂಹಲ ಮೂಡಿಸಿದರು.
ಈ ಪ್ರಶಸ್ತಿ ಪಡೆದ 41ನೇ ವ್ಯಕ್ತಿ ಮೋದಿ ಅವರಾಗಿದ್ದಾರೆ. ಮಾಜಿ ರಾಷ್ಟ್ರಪತಿಗಳಾದ ಡಾ. ಶಂಕರ್ ದಯಾಳ್ ಶರ್ಮಾ, ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ ಮತ್ತು ಡಾ. ಮನಮೋಹನ್ ಸಿಂಗ್, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಡಾ. ಇ.ಶ್ರೀಧರನ್ ಸೇರಿದಂತೆ ಹಲವರಿಗೆ ಈ ಗೌರವ ಸಂದಿದೆ.
ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕ್ ಅವರ ಪರಂಪರೆಯನ್ನು ಮುಮದುವರೆಸಲು ತಿಲಕ್ ಸ್ಮಾರಕ ಮಂದಿರ ಟ್ರಸ್ಟ್‌ನಿಂದ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು 1983 ರಿಂದ ನೀಡಲಾಗುತ್ತಿದೆ. ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸಿದ ಜನರಿಗೆ ಈ ಪ್ರಶಸ್ತಿಯನ್ನು ಪ್ರತಿ ವರ್ಷ ಲೋಕಮಾನ್ಯ ತಿಲಕರ ಪುಣ್ಯತಿಥಿಯಾದ ಆಗಸ್ಟ್ 1 ರಂದು ನೀಡಲಾಗುತ್ತದೆ.
ವೇದಿಕೆ ಮೇಲೆ ಪವಾರ್- ಮೋದಿ: ವೇದಿಕೆ ರಾಜಕೀಯ ದಿಗ್ಗಜರ ಸಮಾಗಮಕ್ಕೂ ಸಾಕ್ಷಿಯಾಯಿತು. ಪ್ರಧಾನಿ ಮೋದಿ ವಿರೋಧಿ ವಿಪಕ್ಷಗಳು ಇಂಡಿಯಾ ಮೈತ್ರಿಕೂಟವನ್ನು ರಚಿಸಿಕೊಂಡಿದ್ದು, ಅದರಲ್ಲಿ ಶರದ್ ಪವಾರ್ ಅವರ ಎನ್‌ಸಿಪಿ ಪಕ್ಷವೂ ಒಂದಾಗಿದೆ. ಅದರ ರಾಷ್ಟ್ರೀಯ ಅಧ್ಯಕ್ಷರಾಗಿರುವ ಶರದ್ ಪವಾರ್ ಅವರು, ಕಾರ್ಯಕ್ರಮದಲ್ಲಿ ಹಾಜರಿದ್ದು, ಪ್ರಧಾನಿ ಮೋದಿ ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು.
ಜೊತೆಗೆ ಎನ್‌ಸಿಪಿ ಪಕ್ಷದಿಂದ ಬಂಡೆದ್ದು, ಬಿಜೆಪಿ ನೇತೃತ್ವದ ಸರ್ಕಾರದ ಭಾಗವಾಗಿರುವ ಡಿಸಿಎಂ ಅಜಿತ್ ಪವಾರ್ ಅವರು ಕೂಡ ಇದೇ ವೇಳೆ ಉಪಸ್ಥಿತರಿದ್ದರು. ಎನ್ಸಿಪಿಯಿಂದ ಬಂಡೆದ್ದ ಬಳಿಕ ಮೋದಿ ಅವರ ಜೊತೆಗೆ ಅಜಿತ್ ಪವಾರ್ ವೇದಿಕೆ ಹಂಚಿಕೊಂಡಿದ್ದು ಇದೇ ಮೊದಲು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ಹೋರಾಟದಲ್ಲಿ ಲೋಕಮಾನ್ಯ ತಿಲಕರ ಪಾತ್ರ, ಕೊಡುಗೆ ಬಹಳ ದೊಡ್ಡದು. ಅವರ ಸಾಹಸವನ್ನು ಕೆಲವು ಘಟನೆ ಮತ್ತು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಿದ್ದು, ನನಗೆ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಪ್ರಶಸ್ತಿಯ ಜೊತೆಗೆ ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಲು ನಿರ್ಧರಿಸಿದ್ದೇನೆ. ಈ ಪ್ರಶಸ್ತಿಯನ್ನು ದೇಶದ 140 ಕೋಟಿ ಜನರಿಗೆ ಅರ್ಪಿಸಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
'ವ್ಯವಸ್ಥೆಯ ನಿರ್ಮಾಣದಿಂದ ಸಂಸ್ಥೆ ನಿರ್ಮಾಣ', 'ಸಂಸ್ಥೆಯ ನಿರ್ಮಾಣದಿಂದ ವ್ಯಕ್ತಿ ನಿರ್ಮಾಣ', 'ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ'ವಾಗುತ್ತದೆ. ಸರ್ಕಾರದ ಯೋಜನೆಗಳು ರಾಷ್ಟ್ರ ನಿರ್ಮಾಣದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತಿವೆ. ದೇಶ ಈ ಮಾರ್ಗಸೂಚಿಯನ್ನು ಶ್ರದ್ಧೆಯಿಂದ ಅನುಸರಿಸುತ್ತಿದೆ ಎಂದು ಮೋದಿ ತಿಳಿಸಿದರು.
ದಗ್ದುಶೇತ್ ಗಣಪನಿಗೆ ಪೂಜೆ; ಇಲ್ಲಿನ ಪ್ರಸಿದ್ಧ ದಗ್ದುಶೇತ್ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಗಣೇಶನಿಗೆ ಪೂಜೆ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿದರು. ಬೆಳಗ್ಗೆ 11 ಗಂಟೆ ಸುಮಾರಿಗೆ ದಗ್ದುಶೇತ್ ಮಂದಿರದಲ್ಲಿ ಪ್ರಧಾನಿ ಪೂಜೆ ನೆರವೇರಿಸಿದರು.
ಇದನ್ನೂ ಓದಿ: 31ನೇ ದಿನದ ಅಮರನಾಥ ಯಾತ್ರೆಯಲ್ಲಿ 3.97 ಲಕ್ಷ ಭಕ್ತರಿಂದ ದರ್ಶನ: 36 ಯಾತ್ರಾರ್ಥಿಗಳ ಸಾವು