ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ಅಡಿಯಲ್ಲಿ ಗ್ರಾಹಕ ಕೇಂದ್ರಿತ ರಿಟೇಲ್ ಡೈರೆಕ್ಟ್ (Retail Direct) ಮತ್ತು ಒಂಬುಡ್ಸಮನ್ (Ombudsman Scheme) ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆನ್ಲೈನ್ ಮೂಲಕ ಶುಕ್ರವಾರ ಚಾಲನೆ ನೀಡಲಿದ್ದಾರೆ.
ಚಿಲ್ಲರೆ ನೇರ ಹೂಡಿಕೆ ಯೋಜನೆಯು ಸರ್ಕಾರಿ ಸ್ವಾಮ್ಯದ ಮಾರುಕಟ್ಟೆಗಳಲ್ಲಿ ಹೂಡಿಕೆದಾರರನ್ನು ಹೆಚ್ಚಿಸುವ ಗುರಿ ಹೊಂದಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಚಿಲ್ಲರೆ ಮಾರುಕಟ್ಟೆಗಳಲ್ಲಿ ನೇರವಾಗಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭದ್ರತೆ ನೀಡುವುದಲ್ಲದೇ, ಮಾರುಕಟ್ಟೆಗಳಲ್ಲಿ ಹೊಸ ಆವಿಷ್ಕಾರಗಳಿಗೆ ಅನುವು ಮಾಡಿಕೊಡಲಿದೆ. ಅಲ್ಲದೇ ಆರ್ಬಿಐನಲ್ಲಿ ಹೂಡಿಕೆದಾರರು ನೇರವಾಗಿ ಮತ್ತು ಉಚಿತವಾಗಿ ತಮ್ಮ ಖಾತೆಯನ್ನು ತೆರೆಯಲು ಅನುಕೂಲ ಮಾಡಿಕೊಡಲಿದೆ.
ಕೇಂದ್ರ ಬ್ಯಾಂಕ್‌ನಿಂದ ನಿಯಂತ್ರಿಸಲ್ಪಡುವ ಇತರೆ ಬ್ಯಾಂಕ್ಗಳ ಶಾಖೆಗಳ ವಿರುದ್ಧ ಗ್ರಾಹಕರು ನೀಡಿದ ದೂರುಗಳನ್ನು ಪರಿಹರಿಸಲು ಮತ್ತು ಖಾತೆದಾರರ ಕುಂದುಕೊರತೆಯನ್ನು ನೀಗಿಸುವ ಕಾರ್ಯವಿಧಾನವನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶವನ್ನು ಓಂಬುಡ್ಸ್ಮನ್ ಯೋಜನೆ ಹೊಂದಿದೆ.
ಬ್ಯಾಂಕ್ಗಳ ವಿರುದ್ಧ ಗ್ರಾಹಕರಿಗೆ ಇರುವ ಅಸಮಾಧಾನ ಮತ್ತು ದೂರುಗಳನ್ನು ಸಲ್ಲಿಸಲು ಪೋರ್ಟಲ್, ಇ-ಮೇಲ್ ಮತ್ತು ಅಂಚೆ ವಿಳಾಸದೊಂದಿಗೆ 'ಒಂದು ರಾಷ್ಟ್ರ- ಒಂದು ಒಂಬುಡ್ಸ್‌ಮನ್' ಮೂಲಕ ದೂರುಗಳನ್ನು ಸಲ್ಲಿಸಲು ಯೋಜನೆ ಸಹಕಾರಿಯಾಗಲಿದೆ.