ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಡೆಯಲಿರುವ ಕೋವಿನ್ ಜಾಗತಿಕ ಸಮಾವೇಶ (CoWIN Global Conclave) ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವರ್ಚುವಲ್ ಸಭೆಯಲ್ಲಿ ವಿಶ್ವದ ವಿವಿಧ ದೇಶಗಳನ್ನು ಪ್ರತಿನಿಧಿಸುವ ಆರೋಗ್ಯ ಮತ್ತು ತಂತ್ರಜ್ಞಾನ ತಜ್ಞರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಕೋ-ವಿನ್ ಮೂಲಕ ಕೋವಿಡ್ ವಿರುದ್ಧ ಹೋರಾಡಲು ಸಾರ್ವತ್ರಿಕ ವ್ಯಾಕ್ಸಿನೇಷನ್ ಬಗ್ಗೆ ಭಾರತದ ಅನುಭವವನ್ನು ಹಂಚಿಕೊಳ್ಳುವ ಉದ್ದೇಶವನ್ನು ಈ ಸಭೆ ಹೊಂದಿದ್ದು, ಕೆನಡಾ, ಮೆಕ್ಸಿಕೊ, ನೈಜೀರಿಯಾ, ಪನಾಮ ಮತ್ತು ಉಗಾಂಡ ಸೇರಿದಂತೆ ಸುಮಾರು 50 ದೇಶಗಳು ತಮ್ಮ ವ್ಯಾಕ್ಸಿನೇಷನ್ ಡ್ರೈವ್‌ಗಳನ್ನು ನಡೆಸಲು ಕೋವಿನ್ ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌ಎಚ್‌ಎ) ಸಿಇಒ ಡಾ.ಆರ್.ಎಸ್. ಶರ್ಮಾ ಇತ್ತೀಚೆಗೆ ಹೇಳಿದ್ದಾರೆ. ಓಪನ್ ಸೋರ್ಸ್ ಸಾಫ್ಟ್‌ವೇರ್ ಅನ್ನು ಉಚಿತವಾಗಿ ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ ಎಂದು ಸೇರಿಸಿದ್ದಾರೆ.
ಈ ವರ್ಚುವಲ್ ಸಭೆಯನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಉದ್ಘಾಟಿಸಲಿದ್ದಾರೆ. ಈ ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಹೆಚ್ ವಿ ಶ್ರೀಂಗ್ಲಾ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ಶರ್ಮಾ ಅವರು ಸಹ ಮಾತನಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು #CoWINGlobalConclave ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಎನ್ಹೆಚ್ಎ ಟ್ವೀಟ್ ಮಾಡಿದೆ. ಕೋ-ವಿನ್ ಮೂಲಕ ಕೊರೊನಾ ವಿರುದ್ಧ ಹೋರಾಡಲು ಸಾರ್ವತ್ರಿಕ ವ್ಯಾಕ್ಸಿನೇಷನ್ ಬಗ್ಗೆ ಭಾರತದ ಅನುಭವವನ್ನು ಹಂಚಿಕೊಳ್ಳಲು ಈ ಸಭೆ ಉದ್ದೇಶಿಸಿದೆ ಎಂದು ಎನ್ಹೆಚ್ಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕೋವಿಡ್ ವ್ಯಾಕ್ಸಿನೇಷನ್ ಅನ್ನು ಕಾರ್ಯಗತಗೊಳಿಸಲು, ಮೇಲ್ವಿಚಾರಣೆ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಭಾರತವು CoWIN ಅನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಿತು. ಇತ್ತೀಚೆಗೆ, ಅನೇಕ ದೇಶಗಳು ಇದನ್ನು ಬಳಸಲು ಆಸಕ್ತಿ ತೋರಿಸಿದೆ ಎಂದು ಎನ್ಹೆಚ್ಎ ತಿಳಿಸಿದೆ. "ಕೋ-ವಿನ್ ಜೊತೆಗೆ ಕೋವಿಡ್ ಅನ್ನು ಗೆಲ್ಲಲು ವಿಶ್ವದೊಂದಿಗೆ ಕೈಜೋಡಿಸಲು ಭಾರತ ಉತ್ಸುಕವಾಗಿದೆ. ಈ ಸಭೆಯಲ್ಲಿ "ಭಾರತದ ವ್ಯಾಕ್ಸಿನೇಷನ್ ಡ್ರೈವ್ನ ಬೆನ್ನೆಲುಬಾದ ಕೋವಿನ್ ಎಂಬ ಮುಕ್ತ ವೇದಿಕೆಯ ಅಭಿವೃದ್ಧಿಯ ಹಿಂದಿನ ಕಥೆಯನ್ನು ನಾವು ಬಿಚ್ಚಿಡುತ್ತಿದ್ದಂತೆ ನಮ್ಮೊಂದಿಗೆ ಸೇರಿ" ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA)ಹೇಳಿದೆ.