ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ನಂತರ ಅವರ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇತ್ತೀಚಿನ ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅನೇಕ ವಿಶ್ವ ನಾಯಕರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಬ್ಯುಸಿನೆಸ್ ಇಂಟೆಲಿಜೆನ್ಸ್ ಕಂಪನಿ, ಮಾರ್ನಿಂಗ್ ಕನ್ಸಲ್ಟ್‌ನ ಇತ್ತೀಚಿನ ಸಮೀಕ್ಷೆಯ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್‌ಗಳ ಪ್ರಕಾರ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ 22 ದೇಶಗಳ ನಾಯಕರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಪಿಎಂ ಮೋದಿ ಅವರು 78% ರೇಟಿಂಗ್‌ನೊಂದಿಗೆ ಸಮೀಕ್ಷೆಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಸಮೀಕ್ಷೆಯ ಪಟ್ಟಿಯ ಪ್ರಕಾರ, ಪಿಎಂ ಮೋದಿ 78% ಜನಪ್ರಿಯತೆಯ ರೇಟಿಂಗ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯಕ್ಷ ಲೋಪೆಜ್ ಒಬ್ರಡಾರ್ 68% ರೇಟಿಂಗ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಮಂತ್ರಿ ಆಂಥೋನಿ ಅಲ್ಬನೀಸ್ ಅವರು 58% ರೇಟಿಂಗ್‌ನೊಂದಿಗೆ ಜನಪ್ರಿಯತೆಯ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇಟಲಿಯ ಪ್ರಧಾನಿ ಜಾರ್ಜಿಯಾ 52 ಶೇಕಡಾ ರೇಟಿಂಗ್‌ನೊಂದಿಗೆ ಜನಪ್ರಿಯತೆಯ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲುಲಾ ಡಿ ಸಿಲ್ವಾ ಅವರು 50 ಶೇಕಡಾ ರೇಟಿಂಗ್ ಅನ್ನು ಪಡೆದುಕೊಂಡಿದ್ದಾರೆ ಮತ್ತು ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಈ ಪಟ್ಟಿಯಲ್ಲಿ 40% ರೇಟಿಂಗ್‌ನೊಂದಿಗೆ ಆರು ಮತ್ತು ಏಳನೇ ಸ್ಥಾನದಲ್ಲಿದ್ದಾರೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಈ ಪಟ್ಟಿಯಲ್ಲಿ 30% ರೇಟಿಂಗ್ ಪಡೆದಿದ್ದು, 16 ನೇ ಸ್ಥಾನದಲ್ಲಿದ್ದಾರೆ. 17 ನೇ ಸ್ಥಾನದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋ ಅವರು ಶೇಕಡಾ 29 ರಷ್ಟು ರೇಟಿಂಗ್ ಪಡೆದಿದ್ದಾರೆ. ಮಾರ್ನಿಂಗ್ ಕನ್ಸಲ್ಟೆಂಟ್ ಪಟ್ಟಿಯಲ್ಲಿರುವ 22 ದೇಶಗಳ ಪ್ರಮುಖ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೆಜಿಲ್, ಕೆನಡಾ, ಜೆಕ್ ರಿಪಬ್ಲಿಕ್, ಫ್ರಾನ್ಸ್, ಜರ್ಮನಿ, ಭಾರತ, ಐರ್ಲೆಂಡ್, ಇಟಲಿ, ಜಪಾನ್, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದೆ.
ಈ ಸಮೀಕ್ಷೆ ಮಾಡುವುದು ಹೇಗೆ?: ಮಾರ್ನಿಂಗ್ ಕನ್ಸಲ್ಟ್ ಪ್ರಕಾರ, ಈ ಜನಪ್ರಿಯತೆಯ ದತ್ತಾಂಶವು ದೇಶದ ವಯಸ್ಕರರೊಂದಿಗೆ ಏಳು ದಿನಗಳ ಕಾಲ ನಡೆಸುವ ಸಮೀಕ್ಷೆಯನ್ನು ಆಧರಿಸಿದೆ. ಮಾರ್ನಿಂಗ್ ಕನ್ಸಲ್ಟ್ ದಿನಕ್ಕೆ 20,000 ಜಾಗತಿಕ ಸಂದರ್ಶನಗಳನ್ನು ನಡೆಸುತ್ತದೆ. ಸಂದರ್ಶನದಲ್ಲಿ ಪಡೆದ ಉತ್ತರಗಳ ಆಧಾರದ ಮೇಲೆ, ಜಾಗತಿಕ ನಾಯಕನ ಬಗ್ಗೆ ರಚಿಸಲಾದ ಡೇಟಾವನ್ನು ತಯಾರಿಸಲಾಗುತ್ತದೆ. ಅಮೆರಿಕದಲ್ಲಿ ಇದರ ಮಾದರಿ ಗಾತ್ರ 45,000 ಸಾವಿರ ಆದ್ರೆ, ಇತರ ದೇಶಗಳ ಮಾದರಿ ಗಾತ್ರವು 500 ರಿಂದ 5000 ರ ನಡುವೆ ಇರುತ್ತದೆ.
ಕಳೆದ ವರ್ಷವೂ ಪ್ರಧಾನಿಯೇ ನಂಬರ್ ಒನ್: ಮಾರ್ನಿಂಗ್ ಕನ್ಸಲ್ಟ್ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ಪ್ರಕಾರ 2021 ವರ್ಷವೂ ಸಹ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅಗ್ರ ನಾಯಕನ ಸ್ಥಾನ ಉಳಿಸಿಕೊಂಡಿದ್ದು, ಮತ್ತಷ್ಟು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದರು. ಗ್ಲೋಬಲ್ ಲೀಡರ್ ಟ್ರ್ಯಾಕರ್‌ನಲ್ಲಿ ಮೋದಿ ಅತ್ಯಧಿಕ ಅಂದರೆ ಶೇಕಡಾ 70 ರೇಟಿಂಗ್ ಅನ್ನು ಪಡೆದುಕೊಂಡಿದ್ದರು.
ಫೇಸ್‌ಬುಕ್‌ನಲ್ಲಿ ಮೋದಿ ಫೇಮಸ್: 2020ರಲ್ಲಿ ತಮ್ಮ ವೈಯಕ್ತಿಕ ಫೇಸ್‌ಬುಕ್‌ನಲ್ಲಿ ಸುಮಾರು 45 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್‌ಬುಕ್‌ನಲ್ಲಿ ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿದ್ದರು. ಆ ವರ್ಷ ಡೊನಾಲ್ಡ್ ಟ್ರಂಪ್ ಎರಡನೇ ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿ ಹೊರ ಹೊಮ್ಮಿದ್ದರು.
ಓದಿ: ರಾಜ್ಯಕ್ಕೆ ಬರಲಿದೆ ವಂದೇ ಭಾರತ್ ಮಾದರಿಯಲ್ಲಿ ವಂದೇ ಮೆಟ್ರೋ: ರೈಲ್ವೇ ಸಚಿವ ಅಶ್ವಿನಿ ವೈಷ್ಣವ್