ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿರುವ ನೆರೆ ಹಾನಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಇಂದು ಬೆಳಗ್ಗೆ ದೂರವಾಣಿ ಕರೆ ಮಾಡಿ ರಾಜ್ಯಾದ್ಯಂತ ಆಗಿರುವ ಸಂಪೂರ್ಣ ನೆರೆ ಬಗ್ಗೆ ವಿಚಾರಿಸಿದರು. ಬೆಳೆ ನಷ್ಟ, ಸಾವು - ನೋವು, ಇತರ ಮಾಹಿತಿ ಪಡೆದಿದ್ದಾರೆ. ಬೆಂಗಳೂರು ಪರಿಸ್ಥಿತಿಯನ್ನು ವಿಶೇಷವಾಗಿ ವಿಚಾರ ಮಾಡಿದ್ದಾರೆ. ಏನೆಲ್ಲಾ ಸಹಾಯವಾಗಬೇಕು ತಿಳಿಸಿ, ನಾನು ಮಾಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ದೂರವಾಣಿ ಕರೆ ಮಾಡಿ ಇಲ್ಲಿಯ ಪ್ರವಾಹದ ಪರಿಸ್ಥಿತಿ ಬಗ್ಗೆ ಕೇಳಿದ್ದಾರೆ. ಎಲ್ಲಾ ವಿವರಗಳನ್ನು ಪಡೆದುಕೊಂಡಿದ್ದಾರೆ ಅವರು ಕೂಡ ಕೇಂದ್ರದಿಂದ ಏನು ಸಹಾಯ ಮಾಡಬೇಕೋ, ಅದೆಲ್ಲವನ್ನೂ ಮಾಡಲು ಸಿದ್ಧವಿದ್ದೇವೆ ಎಂದಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಅಂದಾಜು ಸಮೀಕ್ಷೆಯ ನಂತರ ಬೇಡಿಕೆ: ನೆರೆಹಾನಿ ಸಂಬಂಧ ಪರಿಹಾರದ ಮೊತ್ತದ ಬೇಡಿಕೆಯನ್ನು ಸದ್ಯ ಕೇಂದ್ರದ ಮುಂದೆ ಪ್ರಸ್ತಾಪ ಮಾಡಿಲ್ಲ, ಸಮೀಕ್ಷೆ ನಡೆಸಿ ನಷ್ಟದ ಅಂದಾಜು ಸಿದ್ಧಪಡಿಸಿದ ನಂತರ ಕೇಂದ್ರಕ್ಕೆ ಪರಿಹಾರದ ಬಗ್ಗೆ ಬೇಡಿಕೆ ಇರಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಸಿಎಂ ಪರಿಶೀಲನೆ: ಯಲಹಂಕದಲ್ಲಿ ಎಲ್ಲೆಲ್ಲಿ ಪ್ರವಾಹ ಆಗಿದೆಯೋ ಅಲ್ಲಿಗೆ ಹೋಗುತ್ತಿದ್ದೇನೆ. ಜವಾಹರಲಾಲ್ ನೆಹರೂ ಸಂಸ್ಥೆಗೂ ಹೋಗಿ ಪರಿಶೀಲನೆ ನಡೆಸಿ ಏನೇನು ವ್ಯವಸ್ಥೆ ಕಲ್ಪಿಸಬೇಕು ಎಂದು ಸಮಾಲೋಚಿಸಲಾಗುತ್ತದೆ. ಅದೇ ರೀತಿ ಮಾನ್ಯತಾ ಟೆಕ್ಪಾರ್ಕ್ಗೂ ಹೋಗಲು ಪ್ರಯತ್ನಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಸೋಮವಾರವಷ್ಟೇ ಕೋಲಾರದ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಬೆಳೆ ಹಾನಿಯ ಪರಿಶೀಲನೆ ನಡೆಸಿದ್ದು, ಕೂಡಲೇ ಪರಿಹಾರ ನೀಡುವ ಭರವಸೆ ನೀಡಿದ್ದರು. ಇಂದು ಪ್ರಧಾನಿ ಮತ್ತು ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಪುತ್ರನೂ ಹಗರಣದಲ್ಲಿ ಭಾಗಿ: ಜಾರಿ ನಿರ್ದೇಶನಾಲಯ