ಕೊಯಮತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರ ಬಾಲ್ಯದ ಬಗ್ಗೆ 1ನೇ ತರಗತಿಯ ಪಠ್ಯಪುಸ್ತಕದಲ್ಲಿ ಪಾಠ ಇದೆ ಎನ್ನಲಾಗಿದೆ. 2019ರಲ್ಲಿ ಡಿಸ್ಕವರಿ ವಾಹಿನಿಯ ಜನಪ್ರಿಯ ಸರಣಿ ಕಾರ್ಯಕ್ರಮ 'ಮ್ಯಾನ್ ವರ್ಸಸ್ ವೈಲ್ಡ್' ನಲ್ಲಿ ನರೇಂದ್ರ ಮೋದಿ ಅವರು ಬೇರ್ ಗ್ರಿಲ್ಸ್‌ಗೆ ತಮ್ಮ ಬಾಲ್ಯವನ್ನು ಹಂಚಿಕೊಂಡಿದ್ದರು. ಚಿಕ್ಕ ಹುಡುಗನಾಗಿದ್ದಾಗ ಒಮ್ಮೆ ಮೊಸಳೆಯನ್ನು ಮನೆಗೆ ತಂದಿದ್ದಾಗಿ ಅವರು ಹೇಳಿದ್ದರು. ಆ ಪಾಠವನ್ನೀಗ ಪುಸ್ತಕದಲ್ಲಿ ಅಡಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಸಳೆ ಮರಿಯೊಂದನ್ನು ನೋಡಿ ಅದನ್ನು ಮನೆಗೆ ತಂದಿದ್ದೆ. ಅದನ್ನು ಮತ್ತೆ ಕೆರೆಗೆ ಹಾಕಬೇಕು ಎಂದು ತಾಯಿ ಬೈದು ಕಳುಹಿಸಿದ್ದರು ಎಂದು ಮೋದಿ ಹೇಳಿದ್ದರು. ಇದರಿಂದ ಪ್ರೇರೇಪಿತರಾಗಿರುವ ಇಲ್ಲಿನ ಖಾಸಗಿ ಶಾಲೆಯೊಂದು ಅದನ್ನು ಒಂದನೇ ತರಗತಿ ಪುಸ್ತಕದಲ್ಲಿ ಪಾಠವಾಗಿ ಸೇರಿಸಲು ತೀರ್ಮಾನಿಸಿದೆಯಂತೆ. ಬ್ಯಾರಿ ಓಬ್ರಿಯನ್ ಮತ್ತು ಫೈರ್‌ಫ್ಲೈ ಪ್ರಕಾಶನಗಳ ಮೌಲ್ಯ ಶಿಕ್ಷಣದ 1 ನೇ ತರಗತಿಯ ಪುಸ್ತಕದಲ್ಲಿ ಈ ಮೊಸಳೆಯ ಪಾಠವನ್ನು ಅಳವಡಿಸುವ ಮೂಲಕ ಮೋದಿ ತನ್ನ ಬಾಲ್ಯದಲ್ಲಿ ಎಷ್ಟು ಧೈರ್ಯದಿಂದ ಇದ್ದರು ಎಂದು ತಿಳಿಸಲು ಮುಂದಾಗಿದೆಯಂತೆ.
ಶಾಲೆಯ ಪಠ್ಯಪುಸ್ತಕದಲ್ಲಿ, "ನರೇಂದ್ರ ದಾಮೋದರದಾಸ್ ಮೋದಿ ಅವರು ಭಾರತದ 14ನೇ ಮತ್ತು ಪ್ರಸ್ತುತ ಪ್ರಧಾನಿ. ಅವರು ತಮ್ಮ ಬಾಲ್ಯದಲ್ಲಿ ಎಷ್ಟು ಧೈರ್ಯಶಾಲಿಯಾಗಿದ್ದರೆಂದರೆ ಅವರೊಮ್ಮೆ ಮೊಸಳೆಯನ್ನು ಹಿಡಿದು ಮನೆಗೆ ತಂದಿದ್ದರು" ಎಂದಿದೆ.
ಪ್ರಧಾನಿ ಮೋದಿಯವರ ಬಾಲ್ಯವನ್ನು ಒಳಗೊಂಡಿರುವ ಈ ಪಠ್ಯಪುಸ್ತಕ ಮೊದಲನೆಯದೇನಲ್ಲ. ರನ್ನಡೆ ಪ್ರಕಾಶನ ಮತ್ತು ಬ್ಲೂ ಸ್ನೇಲ್ ಅನಿಮೇಷನ್‌ನ 'ಬಾಲ್ ನರೇಂದ್ರ - ಚೈಲ್ಡ್‌ಹುಡ್ ಸ್ಟೋರೀಸ್ ಆಫ್ ನರೇಂದ್ರ ಮೋದಿ' ಎಂಬ ಕಾಮಿಕ್ ಪುಸ್ತಕವು ಪ್ರಧಾನಿ ಎಷ್ಟು ಧೈರ್ಯವಂತರು ಎಂದು ವಿವರಿಸುವ ಕಥೆಗಳ ಪಟ್ಟಿ ಹೊಂದಿದೆ.
ಗುಜರಾತ್‌ನ ಮೊಸಳೆಗಳಿಂದ ತುಂಬಿರುವ ಸರೋವರದಲ್ಲಿ ಈಜುತ್ತಿದ್ದಾಗ ಮೊಸಳೆಯೊಂದು ಮೋದಿಯ ಮೇಲೆ ದಾಳಿ ಮಾಡಿತ್ತಂತೆ. ಆಗ ಅವರು 8ನೇ ತರಗತಿಯಲ್ಲಿದ್ದರು ಮತ್ತು ಅವರ ಕಾಲಿಗೆ ಒಂಬತ್ತು ಹೊಲಿಗೆಗಳನ್ನು ಹಾಕಲಾಗಿತ್ತು ಎಂದು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು ಸಜೆ