ಮುಜಾಫರ್ನಗರ (ಉತ್ತರ ಪ್ರದೇಶ): ರೈತರ ಹೋರಾಟದ ಪರ ಧ್ವನಿ ಎತ್ತಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಸಾನ್ ಪಂಚಾಯತ್ನಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿನ ಮುಜಾಫರ್ನಗರದಲ್ಲಿ ನಡೆದ ಕಿಸಾನ್ ಪಂಚಾಯತ್ನಲ್ಲಿ ಮಾತನಾಡಿದ ಪ್ರಿಯಾಂಕಾ, ಮೋದಿ ಅವರ ದುರಹಂಕಾರ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಿದೆ ಎಂದಿದ್ದಾರೆ.
ಹಳೆಯ ಕಥೆಗಳಲ್ಲಿ ರಾಜ ಮತ್ತು ರಾಣಿ ತಮ್ಮ ಗೆಲುವಿನ ಬಳಿಕ ದುರಹಂಕಾರಿಗಳಾಗಿರುತ್ತಿದ್ದರು. ಇದೀಗ ಪ್ರಧಾನಿ 2ನೇ ಬಾರಿ ಅಧಿಕಾರಕ್ಕೇರಿದ ಬಳಿಕ ದುರಹಂಕಾರ ತೋರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ರೈತರನ್ನು ಗೌರವಿಸಬೇಕು, ಅವರಿಗೆ ಮತ ನೀಡಿದ ರೈತರ ಜೊತೆ ಯಾಕೆ ಮಾತನಾಡಲು ಮುಂದಾಗುತ್ತಿಲ್ಲ. ಮಾತುಕತೆಯ ಮೂಲಕ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿದೆ.
ಪ್ರಧಾನಿ ಮೋದಿ ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ಮುಂದಾಗುವ ಬದಲು 2 ಅತ್ಯಾಧುನಿಕ ವಿಮಾನ ಖರೀದಿಸಿದ್ದಾರೆ. ಅವರು ಕಬ್ಬು ಬೆಳೆಗಾರರ ಬಾಕಿ ಪಾವತಿಸುವುದಾಗಿ ಈ ಮೊದಲು ಭರವಸೆ ನೀಡಿದ್ದರು. ಆದರೆ ಈವರೆಗೂ ಈಡೇರಿಸಿಲ್ಲ. ಆದರೆ ಹೊಸ ಸಂಸತ್ತು ಭವನಕ್ಕೆ 20 ಸಾವಿರ ಕೋಟಿ ರೂಪಾಯಿ ವ್ಯಯಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರೈತರು ಸಂಕಷ್ಟದಲ್ಲಿದ್ದಾರೆ, ಕೋಟ್ಯದೀಶ್ವರರು ಲಾಭ ಮಾಡಿಕೊಳ್ಳುತ್ತಿದ್ದು, ರೈತರು ಬಿದಿಯಲ್ಲಿ ಕುಳಿತ್ತಿದ್ದಾರೆ ಎಂದು ತಮ್ಮ ಸಿಟ್ಟು ಹೊರ ಹಾಕಿದ್ದಾರೆ.
ಇದನ್ನೂ ಓದಿ: ಅಕ್ಷಯ್, ಬಚ್ಚನ್ ವಿರುದ್ಧ ಮಾತನಾಡಿಲ್ಲ, ಆದರೆ ಅವರ ಕೆಲಸಗಳ ವಿರುದ್ಧ ಇದ್ದೇವೆ: ಪಟೋಲೆ