ಡೆಹ್ರಾಡೂನ್, ಉತ್ತರಾಖಂಡ್ : ಪ್ರಧಾನಿ ನರೇಂದ್ರ ಮೋದಿ ಇಂದು ಡೆಹ್ರಾಡೂನ್‌ಗೆ ಭೇಟಿ ನೀಡಲಿದ್ದಾರೆ. ಸುಮಾರು 18 ಸಾವಿರ ಕೋಟಿ ರೂಪಾಯಿ ಮೌಲ್ಯದ ಹಲವು ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಮೂಲಸೌಕರ್ಯ ಸೇರಿದಂತೆ ಹಲವು ಯೋಜನೆಗಳು ಇಂದು ಉದ್ಘಾಟನೆಯಾಗಲಿವೆ.
ಸಾರಿಗೆಯನ್ನು ಸುಗಮ ಮತ್ತು ಸುರಕ್ಷಿತಗೊಳಿಸಲು ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಈ ಯೋಜನೆಗಳನ್ನು ರೂಪಿಸಲಾಗಿದೆ. ಒಂದು ಕಾಲದಲ್ಲಿ ಅತ್ಯಂತ ದೂರದ ಪ್ರದೇಶಗಳೆಂದು ಪರಿಗಣಿಸಲ್ಪಟ್ಟ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲು ಈ ಯೋಜನೆಗಳು ನೆರವಾಗಲಿವೆ.
ಪ್ರಧಾನಿ ಮೋದಿ 8,300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಯೋಜನೆ ಸೇರಿದಂತೆ 11 ಅಭಿವೃದ್ಧಿ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರಲ್ಲಿ ದೆಹಲಿ-ಡೆಹ್ರಾಡೂನ್ ಎಕನಾಮಿಕ್ ಕಾರಿಡಾರ್‌ನಿಂದ ಗ್ರೀನ್‌ಫೀಲ್ಡ್ ಜೋಡಣೆಯ 2 ಸಾವಿರ ಕೋಟಿ ಮೊತ್ತದ ಯೋಜನೆಯೂ ಇದೆ.
1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡೆಹ್ರಾಡೂನ್- ಪೌಂಟಾ ಸಾಹಿಬ್ ರಸ್ತೆ ಯೋಜನೆಯು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ನಡುವಿನ ಅಂತಾರಾಜ್ಯ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ನಜೀಬಾಬಾದ್-ಕೋಟ್‌ದ್ವಾರ ರಸ್ತೆಯ ಮೂಲಕ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಾಗುತ್ತದೆ. ಗಂಗಾ ನದಿಗೆ ಅಡ್ಡಲಾಗಿ ಸೇತುವೆಯನ್ನು ಕೂಡ ನಿರ್ಮಿಸಲಾಗುತ್ತದೆ.
ಪ್ರಧಾನಿ ಡೆಹ್ರಾಡೂನ್‌ನಲ್ಲಿ ಮಕ್ಕಳ ಸ್ನೇಹಿ ನಗರ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಪ್ರಯಾಣಕ್ಕೆ ರಸ್ತೆಗಳನ್ನು ಸುರಕ್ಷಿತಗೊಳಿಸುವ ಮೂಲಕ ನಗರವನ್ನು ಮಕ್ಕಳ ಸ್ನೇಹಿಯನ್ನಾಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಡೆಹ್ರಾಡೂನ್‌ನಲ್ಲಿ ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ಸರಬರಾಜು, ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೂ ಶಂಕುಸ್ಥಾಪನೆ ನಡೆಯಲಿದೆ. ಇದರೊಂದಿಗೆ ಹರಿದ್ವಾರದಲ್ಲಿ ಹೊಸ ವೈದ್ಯಕೀಯ ಕಾಲೇಜು, ವ್ಯಾಸಿ ಜಲವಿದ್ಯುತ್ ಯೋಜನೆ, ರಾಜ್ಯದ ಸುಗಂಧ ದ್ರವ್ಯ ಪ್ರಯೋಗಾಲಯಗಳೂ ಉದ್ಘಾಟನೆಯಾಗಲಿವೆ.
ಇದನ್ನೂ ಓದಿ: ಅವಿಭಜಿತ ಆಂಧ್ರದ ಮಾಜಿ ಸಿಎಂ, ಕರ್ನಾಟಕದ ಮಾಜಿ ಗವರ್ನರ್ ಕೆ.ರೋಸಯ್ಯ ವಿಧಿವಶ